ಆ.21ರಿಂದ ಭರತನಾಟ್ಯದಲ್ಲಿ ವಿಶ್ವದಾಖಲೆಗೆ ಪ್ರಯತ್ನಿಸಲಿರುವ ದೀಕ್ಷಾ ವಿ.

ಉಡುಪಿ, ಆ.18: 15ದಿನಳ ಹಿಂದಷ್ಟೇ ಮಂಗಳೂರಿನ ರೆಮೋನಾ ಎವೆಟ್ ಪಿರೇರಾ ಅವರು 170 ಗಂಟೆಗಳ ಕಾಲ ಭರತನಾಟ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿ ನಾಡಿನ ಗಮನ ಸೆಳೆದಿದ್ದರೆ, ಇದೀಗ ಉಡುಪಿಯ ಯುವತಿಯೊಬ್ಬರು ಈ ದಾಖಲೆಯನ್ನು ಮುರಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮುಂಡ್ಕಿನಜೆಡ್ಡಿನ ನಿವಾಸಿ ವಿದುಷಿ ದೀಕ್ಷಾ ವಿ. ಇವರು ಇದೇ ಆ.21ರಿಂದ 30ರವರೆಗೆ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ತನ್ನ ಹೆಸರಿನಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಕಲಾ ಗುರುಗಳಾದ ವಿದ್ವಾನ್ ಶ್ರೀಧರ ರಾವ್ ಇವರ ಶಿಷ್ಯೆಯಾಗಿರುವ ದೀಕ್ಷಾ ವಿ. ಅವರು ಇಂದು ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಗುರುಗಳೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಭರತನಾಟ್ಯದಲ್ಲಿ ವಿಶೇಷ ಪ್ರೀತಿ ಹಾಗೂ ಆಸಕ್ತಿಯನ್ನು ಹೊಂದಿರುವ ದೀಕ್ಷಾ, ಈ ಕಲೆಯಲ್ಲಿ ವಿಶೇಷ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿದ್ದಾರೆ. ಇದೀಗ ಹಲವರ ಮಾರ್ಗದರ್ಶನ, ಸಲಹೆಯೊಂದಿಗೆ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಸಾಧಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಬಹುಮುಖ ಪ್ರತಿಭೆಯ ವಿದುಷಿ ದೀಕ್ಷಾ ಭರತನಾಟ್ಯವನ್ನಲ್ಲದೇ, ಯಕ್ಷಗಾನ, ವೀಣೆ, ಚಂಡೆ, ಮದ್ದಳೆ, ಚಿತ್ರಕಲೆ ಸಹಿತ ಅನೇಕ ಪ್ರಕಾರಗಳಲ್ಲಿ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ಮೆರೆದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಅಮೃತಭಾರತಿ ಪಿಯು ಕಾಲೇಜಿ ನಲ್ಲಿ, ಪದವಿ ಶಿಕ್ಷಣ ವನ್ನು ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನಲ್ಲಿ ಪೂಣಗೊಳಿಸಿ ರುವ ದೀಕ್ಷಾ, ಇದೀಗ ಕುಂಜಿಬೆಟ್ಟಿನ ಡಾ.ಟಿಎಂಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್ ಪದವಿ ಓದುತಿದ್ದಾರೆ.
ಈ ವಿಶೇಷ ಪ್ರಯತ್ನದಲ್ಲಿ ದೀಕ್ಷಾ ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಉಡುಪಿಯ ಪ್ರಸಿದ್ಧ ಕಲಾ ಶಿಕ್ಷಣ ಸಂಸ್ಥೆ ಯಾದ ರತ್ನ ಸಂಜೀವ ಕಲಾಮಂಡಲ ಮಣಿಪಾಲ. ಮಾಜಿ ಶಾಸಕ ಕೆ.ರಘುಪತಿ ಭಟ್ ಮಾರ್ಗದರ್ಶಮನ ಹಾಗೂ ಮಹೇಶ್ ಠಾಕೂರ್ ಅವರ ಮುಂದಾಳತ್ವದಲ್ಲಿ ರತ್ನ ಸಂಜೀವ ಕಲಾಮಂಡಲ ಈ ವಿಶ್ವದಾಖಲೆ ಸಾಧನೆಯ ಕಾರ್ಯಕ್ರಮದ ಸಂಪೂರ್ಣ ನೇತೃತ್ವ ವಹಿಸಿಕೊಂಡಿದೆ ಎಂದು ಸಂಘಟನೆ ಅಶ್ವಿನಿ ಮೇಶ್ ಠಾಕೂರ್ ತಿಳಿಸಿದರು.
ಭರತನಾಟ್ಯದಲ್ಲಿ ವಿದುಷಿ ಪದವಿ ಪಡೆದಿರುವ ದೀಕ್ಷಾ ವಿ. ಅವರು ಆ.21ರ ಗುರುವಾರ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪಿಜಿ ಎಬಿ ಸಭಾಂಗಣದಲ್ಲಿ ತಮ್ಮ ವಿಶ್ವದಾಖಲೆಯ ಪ್ರದರ್ಶನವನ್ನು ಪ್ರಾರಂಭಿಸಲಿದ್ದು, ನಿರಂತರ 216 ಗಂಟೆಗಳ ಪ್ರದರ್ಶನದ ಬಳಿಕ ಆ.31ರಂದು ಮುಕ್ತಾಯಗೊಳಿಸಲಿದ್ದಾರೆ.
ಒಂಭತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ‘ನವರಸ ದೀಕ್ಷಾ ವೈಭವಂ’ ಎಂದು ಹೆಸರಿಸಲಾಗಿದ್ದು, ಕೊನೆಯ ದಿನದಂದು ಅದ್ದೂರಿಯ ಕಾರ್ಯಕ್ರಮ ನಡೆಸುವುದಾಗಿ ರತ್ನ ಸಂಜೀವ ಕಲಾಮಂಡಲದ ಅಶ್ವಿನಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಶ್ರೀಧರ ರಾವ್, ವಿದುಷಿ ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.







