ಅನುದಾನ ಬಿಡುಗಡೆ ವಿಳಂಬ; ಹಿಂದುಳಿದ ವರ್ಗದ ಶಾಸಕರಿಂದ ಧರಣಿ: ಕೋಟ ಎಚ್ಚರಿಕೆ

ಉಡುಪಿ, ನ.11: ಹಿಂದುಳಿದ ವರ್ಗವನ್ನು ರಾಜ್ಯ ಸರಕಾರ ತೀರಾ ನಿರ್ಲಕ್ಷ್ಯ ಮಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಕೊಟ್ಟು ಹಣ ಬಿಡುಗಡೆ ಮಾಡಿತ್ತು. ಆದರೆ ಅದರ ಪ್ರಯೋಜನ ಇವತ್ತಿಗೂ ಸಿಗಲಿಲ್ಲ. ವಾರದೊಳಗೆ ಅನುದಾನ ಬಿಡುಗಡೆ ಮಾಡದಿದ್ದರೆ ಹಿಂದುಳಿದ ವರ್ಗದ ಶಾಸಕರು, ಮಾಜಿ ಶಾಸಕರು ಸೇರಿ ಸರಕಾರದ ವಿರುದ್ಧ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2400 ಹಾಸ್ಟೆಲ್‌ಗಳಿದ್ದು, ಒಂದು ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲಿಗೆ ಬೇಡಿಕೆ ಇರಿಸಿದ್ದಾರೆ. ವಿದ್ಯಾರ್ಥಿ ನಿಲಯ ಇಲ್ಲದೆ ಶಿಕ್ಷಣ ಪಡೆಯಲು ಹಿಂದುಳಿದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಸಮುದಾಯ ಭವನ ನಿರ್ಮಿಸಿ ಇಲಾಖೆಗೆ ವರದಿ ಕೊಟ್ಟರು ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮತ್ತು ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಮುಖಂಡರಾದ ಅಮಿತ್ ಶಾ, ನಡ್ದಾ, ಬಿ.ಎಲ್.ಸಂತೋಷ್ ಬಹಳ ಸಮರ್ಥ, ಯುವಕ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಬಿಜೆಪಿಯ ಇಡೀ ತಂಡ ವಿಜಯೇಂದ್ರ ಜೊತೆ ಒಟ್ಟಾಗಿ ನಿಲ್ಲುತ್ತದೆ. ಮುಂದಿನ ಚುನಾವಣೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಪಕ್ಷದ ಮುಖಂಡರಾಗಿದ್ದಾರೆ. ಆದುದರಿಂದ ಯಡಿಯೂರಪ್ಪ ಅವರ ಮಗ ಕೂಡ ಬಿಜೆಪಿಯ ಒಬ್ಬ ಕಾರ್ಯ ಕರ್ತರಾಗಿದ್ದಾರೆ. ಯಡಿಯೂರಪ್ಪಅವರ ಓರ್ವ ಪುತ್ರ ಎಂಪಿ ಆಗಿದ್ದರೆ, ಈಗ ಮತ್ತೊಬ್ಬ ಪುತ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ.ಎಲ್ಲಾ ಸಮಾಜವನ್ನು ಒಟ್ಟುಗೂಡಿಸಿಕೊಂಡು ಒಂದು ರಾಜಕೀಯ ಪಕ್ಷವನ್ನು ಕಟ್ಟಲಾಗುತ್ತದೆ ಎಂದರು.
ಪಕ್ಷ ಕಳೆದ ಬಾರಿ ನನಗೆ ವಿಪಕ್ಷ ನಾಯಕರ ಸ್ಥಾನದ ಅವಕಾಶ ಕೊಟ್ಟಿತ್ತು. ಈ ಬಾರಿ ಪಕ್ಷ ಯಾವ ನಿರ್ಧಾರ ತೆಗೆದು ಕೊಳ್ಳುತ್ತದೆ ಗೊತ್ತಿಲ್ಲ. ಪಕ್ಷದ ವಿಪಕ್ಷ ನಾಯಕ ನಾಗುವ ಅವಕಾಶ ಕೊಟ್ಟರೆ ನಾನು ಸ್ವೀಕಾರ ಮಾಡಿ ನಿಭಾಯಿಸುತ್ತೇನೆ. ಒಟ್ಟು 34 ಜನ ಮೇಲ್ಮನೆ ಸದಸ್ಯರಿದ್ದೇವೆ. ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.







