ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಅರ್ಹ ಕುಶಲಕರ್ಮಿಗಳಿಗೆ ತಲುಪಿಸಿ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆಗಳನ್ನು ನೀಡಿದ್ದಾರೆ.
ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಕುಶಲಕರ್ಮಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದರ ಜೊತೆಗೆ ಅವರುಗಳಿಗೆ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿ, ಸ್ವಾವಲಂಭಿ ಜೀವನ ನಡೆಸುವುದರೊಂದಿಗೆ ಆರ್ಥಿಕರಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವು ದರೊಂದಿಗೆ ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದವರು ನಿರ್ದೇಶನ ನೀಡಿದರು.
ಯೋಜನೆ ಕುಶಲಕರ್ಮಿಗಳಿಗೆ ಸಹಾಯ ಆಧಾರಿತ ಯೋಜನೆಯಾಗಿದ್ದು, ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಕುಶಲರ್ಕುಗಳಿಗೆ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮತ್ತು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕೃತ ಪಿ.ಎಂ ವಿಶ್ವಕರ್ಮ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.
ಸ್ಥಳೀಯ ಗ್ರಾಮಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಸಾಂಪ್ರದಾಯಿಕವಾಗಿ ಕುಶಲ ಕರ್ಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕುಟುಂಬದ ಸದಸ್ಯರು ಸರ್ಕಾರಿ ಸೇವೆಯಲ್ಲಿ ಇಲ್ಲದೇ ಇರುವ ಕುಟುಂಬದ ಏಕ ಮಾತ್ರ ಸದಸ್ಯರನ್ನು ಯೋಜನೆಗೆ ಶಿಫಾರಸ್ಸು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಡಗಿ, ಮರಗೆಲಸ, ದೋಣಿ ತಯಾರಿಕೆ, ಸುತ್ತಿಗೆ ನತ್ತು ಉಪಕರಣಗಳನ್ನು ತಯಾರಿಸುವವರು, ಬೀಗ ತಯಾರಕರು, ನೇಕಾರರು, ಕುಂಬಾರಿಕೆ, ಪಾದರಕ್ಷೆ ತಯಾರಿಕೆ, ಚರ್ಮಗಾರಿಕೆ, ಅಕ್ಕಸಾಲಿಗರು, ಕಮ್ಮಾರರು, ಅಗಸರು, ಟೈಲರ್, ಶಿಲ್ಪ ರಚನಾಕಾರರು, ಚಮ್ಮಾರ, ಮೇಸ್ತ್ರಿ, ಗೊಂಬೆ, ಆಟಿಕೆ ತಯಾರಕರು, ಬುಟ್ಟಿ ತಯಾರಿಸುವವರು, ದೋಬಿಗಳು, ಕ್ಷೌರಿಕರು, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಮಾಲೆ ತಯಾರಕರು ಸೇರಿದಂತೆ ಇತರರು ಈ ಯೋಜನೆಯಡಿ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.
ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾ ಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತ್ವರಿತವಾಗಿ ಯೋಜನೆಗೆ ನೋಂದಣಿ ಮಾಡಬಹುದಾಗಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಡಿಜಿಟಲ್ ಐ.ಡಿ ಕಾರ್ಡ್ ಹಾಗೂ ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರವನ್ನು ನೀಡುವುದರ ಜೊತೆಗೆ ಮೂಲಭೂತ ಕೌಶಲ್ಯ ತರಬೇತಿ ಹಾಗೂ ಉಪಕರಣಗಳನ್ನು ನೀಡಲಾಗುವುದು. ಜೊತೆಗೆ ಶೇ.೫ರ ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ವರೆಗೆ ಸಾಲ ಸೌಲಭ್ಯವನ್ನೂಒದಗಿಸಲಾಗುವುದು ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಎಂ.ಎಸ್.ಎಂ.ಇ ಅಧಿಕಾರಿ ಸುಂದರ್ ಶೇರಿಗಾರ್, ಸಾಮಾನ್ಯ ಸೌಲಭ್ಯ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಗೋವರ್ಧನ್, ಎಸ್.ಕೆ.ಡಿ.ಆರ್.ಡಿ.ಪಿ ಜಿಲ್ಲಾ ನೋಡಲ್ ಅಧಿಕಾರಿ ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







