ಉಡುಪಿ ನಗರ ವ್ಯಾಪ್ತಿಯ ಒಳಚರಂಡಿ ವಿಸ್ತರಣೆ, ಮಳೆ ಹಾನಿ ಪರಿಹಾರಕ್ಕೆ ಆಗ್ರಹ

ಉಡುಪಿ, ಡಿ.13: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವಿಸ್ತರಣೆ ಯೋಜನೆಗೆ ಅನುದಾನ ಒದಗಿಸುವಂತೆ ಹಾಗೂ ಪರ್ಯಾಯ ಮಹೋತ್ಸವ ಅಗತ್ಯ ಕಾಮಗಾರಿ ಹಾಗೂ ಮಳೆ ಹಾನಿ ಪರಿಹಾರ ಅನುದಾನ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಅಧಿವೇಶನದಲ್ಲಿ ಮನವಿ ಮಾಡಿದರು.
ಸುಮಾರು 3 ಲಕ್ಷ ಜನಸಂಖ್ಯೆ ಹೊಂದಿರುವ ಉಡುಪಿ ನಗರಸಭೆಯ ವಿವಿಧ ಭಾಗಗಳಿಗೆ ಒಳಚರಂಡಿ ವಿಸ್ತರಿಸುವ ಅಗತ್ಯವಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದ್ದು ಬಹುತೇಕ ರಸ್ತೆಗಳು ಹದಗೆಟ್ಟು ಸಂಚಾರ ಯೋಗ್ಯವಾಗಿಲ್ಲ. ವಿಕಲಚೇತನರು ಬಳಸುವ ತ್ರಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಾದ್ಯಂತ ನೂರು ಕೋಟಿಗೂ ಮಿಕ್ಕಿ ಮಳೆ ಹಾನಿಯಾಗಿದೆ. ಈ ಹಿಂದೆ ಉಡುಪಿ ಪರ್ಯಾಯ ಮಹೋತ್ಸವದ ಹಿನ್ನೆಲೆ ಅಗತ್ಯ ಮೂಲ ಸೌಕರ್ಯ ಕಾಮಗಾರಿಗಳಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಗರಸಭೆಗೆ 25 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿತ್ತು. ಕಡಲ್ಕೊರೆತದಂತಹ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ತಕ್ಷಣ 50 ಕೋಟಿ ಅನುದಾನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅವರು ಆಗ್ರಹ ಮಾಡಿದರು





