ಹೊಂಡಮಯ ಉಡುಪಿ ವಿದ್ಯಾರಣ್ಯ ಮಾರ್ಗದ ದುರಸ್ತಿಗೆ ಆಗ್ರಹ

ಉಡುಪಿ: ನಗರದ 33ನೇ ಅಜ್ಜರಕಾಡು ವಾರ್ಡಿನಲ್ಲಿ ಬರುವ, ವಿದ್ಯಾರಣ್ಯ ಮಾರ್ಗವು, ಕವಿ ಮುದ್ದಣ ಮಾರ್ಗದಿಂದ ಕಾಡಬೆಟ್ಟು, ಅಂಬಲಪಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ. ಇದನ್ನು ಕೂಡಲೇ ಸಂಬಂಧಪಟ್ಟವರು ದುರಸ್ತಿ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಳೆಗಾಲ ಆರಂಭದ ಪೂರ್ವದಲ್ಲಿ ಅಲಂಕಾರ್ ಚಿತ್ರಮಂದಿರದ ಬಳಿ, ರಸ್ತೆಯ ನಡುವಿನ ತಳದಲ್ಲಿದ್ದ ಡ್ರೈನೇಜ್ ಕೊಳವೆಗಳನ್ನು ಬದಲಿಸುವ ಕಾಮಗಾರಿ ನಡೆದಿತ್ತು. ಗುಂಡಿ ಅಗೆದಿರುವ ಸ್ಥಳದಲ್ಲಿ ಜಲ್ಲಿಕಲ್ಲು, ಜಲ್ಲಿಹುಡಿ ಹಾಕಿ ಮುಚ್ಚಿಡಲಾಗಿತ್ತು. ಈಗ ಗುಂಡಿ ತೋಡಿರುವ ಸ್ಥಳವು ಕುಸಿತ ಗೊಂಡಿದ್ದು, ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿವೆ.
ಕಿರುದಾಗಿರುವ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ವಾಹನದಟ್ಟಣೆಯ ಈ ರಸ್ತೆಯು ಹದಗೆಟ್ಟ ಕಾರಣದಿಂದ ಅಪಘಾತಗಳು ಸಂಭವಿಸುವುದು ಕಂಡುಬರುತ್ತಿವೆ. ಗೂಗಲ್ ಮಾರ್ಗ ಸೂಚಿಯು ಶ್ರೀಕೃಷ್ಣ ಮಠವನ್ನು ಸಂಪರ್ಕಿಸಲು ಈ ಮಾರ್ಗವನ್ನು ಸೂಚಿಸುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಯಾತ್ರಿಕರ ಪ್ರವಾಸಿಗರ ವಾಹನಗಳು ಈ ಮಾರ್ಗದಿಂದ ನಗರವನ್ನು ಪ್ರವೇಶಿಸುತ್ತವೆ.
ಈ ಪರಿಸರದಲ್ಲಿ ಹಲವಾರು ಪ್ರಸಿದ್ಧ ಆಸ್ಪತ್ರೆಗಳಿದ್ದು, ಜೀವರಕ್ಷಕ ಅಂಬುಲೆನ್ಸ್ ವಾಹನಗಳು ಸಂಚರಿಸುತ್ತಿರುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಹಳ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿಯೇ ನಡೆದು ಸಾಗುತ್ತಿರುತ್ತಾರೆ. ಧೂಳೇಳುವ ರಸ್ತೆಯಲ್ಲಿ ಸಾರ್ವಜನಿಕರು ಶ್ವಾಸಕೋಶ, ಕಣ್ಣಿನ ತೊಂದರೆಗಳಿಗೆ ತುತ್ತಾಗಬೇಕಾದ ಪರಿಸ್ಥಿತಿಯು ಎದುರಾಗಿದೆ.
ಜಿಲ್ಲಾಡಳಿತ, ನಗರಾಡಳಿತ ತಕ್ಷಣವಾಗಿ ದುಸ್ಥಿತಿಯಲ್ಲಿರುವ ವಿದ್ಯಾರಣ್ಯ ಮಾರ್ಗವನ್ನು ಡಾಮರೀಕರಣ ಮಾಡಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.







