ಸಾಂವಿಧಾನಿಕ ಹಕ್ಕುಗಳ ನಿರಾಕರಣೆ ಪ್ರಜಾಪ್ರಭುತ್ವದ ಅಧಃಪತನಕ್ಕೆ ಮುನ್ನುಡಿ: ಪಿ.ಸತೀಶ್
ವಿಮಾ ನೌಕರರ ಸಂಘಗ 65ನೇ ವಿಭಾಗೀಯ ಸಮ್ಮೇಳನ ಉದ್ಘಾಟನೆ

ಉಡುಪಿ: ಸರಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದವರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿದೆ. ಸರಕಾರವು ಸಂವಿಧಾನದ ಎಲ್ಲಾ ಅಂಗ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದ ಜನರಿಗೆ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಜೊತೆಗೆ ಸರಕಾರವು ಅಧಿಕಾರ ಕೇಂದ್ರೀಕರಣದತ್ತ ಹೆಜ್ಜೆ ಇಡುತ್ತ ಪ್ರಜಾ ಪ್ರಭುತ್ವದ ಅಧಃಪತನಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಅಧ್ಯಕ್ಷ ಪಿ.ಸತೀಶ್ ಹೇಳಿದ್ದಾರೆ.
ಉಡುಪಿ ನಗರದ ಎಲ್‌ಐಸಿ ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ರವಿವಾರ ನಡೆದ ವಿಮಾ ನೌಕರರ ಸಂಘ, ಉಡುಪಿ ವಿಭಾಗದ ೬೫ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸರಕಾರದ ನೀತಿಗಳಿಂದಾಗಿ ಇಂದು ಎಲ್.ಐ.ಸಿ.ಯೂ ಸೇರಿದಂತೆ ಎಲ್ಲಾ ಸಾರ್ವಜನಿಕ ರಂಗದ ಉದ್ದಿಮೆಗಳ ಭವಿಷ್ಯವು ಡೋಲಾಯಮಾನ ಸ್ಥಿತಿಯಲ್ಲಿ ಇದೆ. ಕಾರ್ಪೋರೆಟ್ ದೊರೆಗಳ ಕಪಿಮುಷ್ಟಿಯಲ್ಲಿರುವ ಸರಕಾರವು ಅವರ ಒತ್ತಾಸೆಯ ಮೇರೆಗೆ ನೀತಿಗಳನ್ನು ರೂಪಿಸಿ ಸಾರ್ವಜನಿಕ ರಂಗದ ಉದ್ದಿಮೆಗಳ ವಿನಾಶಕ್ಕೆ ನಾಂದಿ ಹಾಡುತ್ತಿದೆ ಎಂದು ಅವರು ತಿಳಿಸಿದರು.
ಸರಕಾರದ ತೆರಿಗೆ ನೀತಿಗಳಿಂದಾಗಿ ಜನಸಾಮಾನ್ಯರ ಉಳಿತಾಯ ಮತ್ತು ಹೂಡಿಕೆಯ ಪ್ರಮಾಣ ಅಗಾಧವಾಗಿ ಕುಂಠಿತವಾಗಿದ್ದು, ಇದು ಸಾರ್ವಜನಿಕ ರಂಗದ ಎಲ್.ಐ.ಸಿ.ಯ ಮೇಲೆ ಪರಿಣಾಮ ಬೀರುತ್ತಿದೆ ಎಂದ ಅವರು, ಕಳೆದ ೭೪ ವರ್ಷಗಳಿಂದ ಕಾರ್ಮಿಕರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ರುವ ಸಂಘದ ಹೋರಾಟಗಳಲ್ಲಿ ನಿರಂತರವಾಗಿ ಪಾಲ್ಗೊಂಡು ಸರಕಾರದ ನೀತಿಗಳ ವಿರುದ್ಧ ಹಾಗೂ ಸಾಮಾಜಿಕ ಬದಲಾವಣೆಗಾಗಿ ಶ್ರ್ರಮಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಸ್.ಕೆ.ಗೀತಾ ಮಾತನಾಡಿ, ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಇಂದಿಗೂ ಹೋರಾಟ ನಡೆಸುವ ಜನಸಾಮಾನ್ಯರನ್ನು ಗಮನಿಸಿದಾಗ, ಸರಕಾರಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣಿಸುತ್ತಿದೆ. ದೇಶದ ಬಹುಮುಖೀ ಸಂಸ್ಕೃತಿಯನ್ನು ಕಾಪಾಡುವ ಸರಕಾರವು ಇಂದು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಏಕಮುಖಿ ಸಂಸ್ಕೃತಿಯನ್ನು ಜನತೆಯ ಮೇಲೆ ಹೇರಿ ದೇಶದ ಏಕತೆ ಮತ್ತು ಸಮಗ್ರತೆಗೆ ಭಂಗ ತರುತ್ತಿದೆ ಎಂದು ಆರೋಪಿಸಿದರು.
ಸರಕಾರಿ ರಂಗದ ಕೈಗಾರಿಕೆಗಳ ಮೇಲೆ ಪ್ರಹಾರ ನಡೆಸುವ ಸರಕಾರದ ನೀತಿಯು ಇಂದು ಸಾಲದ ಮೇಲೆ ಕಾರ್ಯನಿರ್ವಹಿಸಲ್ಪಡುತಿತ್ತಿದೆ. ಈ ವ್ಯವಸ್ಥೆಯಲ್ಲಿ ದೇಶದ ಜನಸಾಮಾನ್ಯರೂ ಕೂಡಾ ತಮ್ಮ ಅಗತ್ಯತೆಗಳಿಗಾಗಿ ಸಾಲವನ್ನು ಅವಲಂಬಿಸುವಂತಾಗಿದೆ. ಈ ಕಾಲಘಟ್ಟದಲ್ಲಿ ಸಾರ್ವಜನಿಕ ಉದ್ದಿಮೆಗಳ ರಕ್ಷಣೆ ಮತ್ತು ವಿಮಾ ರಂಗದ ಅಗ್ರಗಣ್ಯ ಸಂಸ್ಥೆಯಾಗಿರುವ ಎಲ್.ಐ.ಸಿ.ಯನ್ನು ಉಳಿಸುವ ನಿಟ್ಟಿನಲ್ಲಿ ಪಣತೊಡಬೇಕು ಎಂದರು.
ಉಡುಪಿ ಜಿಲ್ಲಾ ಸಿಐಟಿಯು ಕೋಶಾಧಿಕಾರಿ ಶಶಿಧರ ಗೊಲ್ಲ ಮಾತನಾಡಿ ದರು. ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿ ಕಾರಿ ರಾಜೇಶ್ ವಿ.ಮುಧೋಳ್ ಶುಭ ಹಾರೈಸಿದರು.
ವಿಮಾ ಪಿಂಚಣಿದಾರರ ಸಂಘದ ಕಾರ್ಯದರ್ಶಿ ವಿಠಲಮೂರ್ತಿ ಆಚಾರ್ಯ, ವಿಮಾ ಅಧಿಕಾರಿಗಳ ಸಂಘದ ಕಾರ್ಯದರ್ಶಿ ನರಸಿಂಹ ಪ್ರಭು, ವಿಮಾ ನೌಕರರ ಸಂಘದ ಮಹಿಳಾ ಉಪಸಮಿತಿಯ ಸಂಚಾಲಕಿ ನಿರ್ಮಲ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಕವಿತಾ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಒಟ್ಟು 250 ಮಂದಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
2023-24ರ ಸಾಲಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ವಿಶ್ವನಾಥ್, ಉಪಾಧ್ಯಕ್ಷರುಗಳಾಗಿ ಡೆರಿಕ್ ಎ.ರೆಬೆಲ್ಲೋ ಮತ್ತು ನಿರ್ಮಲ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ ಬಿ.ಕುಂದರ್, ಜತೆ ಕಾರ್ಯದರ್ಶಿಗಳಾಗಿ ಉಮೇಶ್ ಮತ್ತು ಕವಿತಾ ಎಸ್., ಕೋಶಾಧಿಕಾರಿಯಾಗಿ ಶ್ರೀಪಾದ ಹೆರ್ಳೆ ಪಿ., ಉಪ ಕೋಶಾಧಿಕಾರಿಯಾಗಿ ಚರಣ್. ಆಯ್ಕೆಯಾದರು.







