ಸೌಜನ್ಯ ಪ್ರಕರಣದ ಪ್ರತಿಭಟನಾ ಸಭೆಯಲ್ಲಿ ಅವಹೇಳನಕಾರಿ ಭಾಷಣ: ಕ್ರಮಕ್ಕೆ ಎಸ್ಪಿ, ಡಿಸಿಗೆ ಮನವಿ

ಉಡುಪಿ, ಸೆ.20: ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ಸೆ.24ರಂದು ನಡೆಯುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನಕಾರಿ ಹಾಗೂ ಪ್ರಚೋದನಕಾರಿಯಾಗಿ ಮಾತನಾಡದಂತೆ ಮುಚ್ಚಳಿಕೆ ಬರೆಸಿಕೊಂಡು ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಆಗ್ರಹಿಸಿ ಕಾರ್ಕಳದ ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಎಸ್ಪಿ ಹಾಗೂ ಡಿಸಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪುತ್ತಿದ್ದು, ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯಾವುದೇ ದಾಖಲೆ ಇಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಜೊತೆಗೆ ಧರ್ಮ ಧರ್ಮಗಳ ಮಧ್ಯೆ ವೈಮನಸ್ಸು, ಧ್ವೇಷ ಹುಟ್ಟಿಕೊಳ್ಳುತ್ತದೆ.
ಈಗಾಗಲೇ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದಂತೆ ಹಾಗೂ ನಿರ್ಬಂಧಕಾಜ್ಞೆ ಆಗಿದೆ. ಆದರೆ ನ್ಯಾಯಾಲ ಯದ ಆದೇಶಕ್ಕೆ ಯಾವುದೇ ಬೆಲೆ ಕೊಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದೀಗ ಕುಕ್ಕುಂದೂರು ಪ್ರತಿಭಟನಾ ಸಭೆಗೆ ಅನುಮತಿ ನೀಡಲಾಗಿದ್ದು, ಈ ಹಿಂದಿನ ಸಭೆಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಕುಸುಮಾವತಿ ಹಾಗೂ ಇತರರು ಹಿಂದು ಸಮಾಜದ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟು ಮಾಡುವ, ಡಾ.ವೀರೇಂದ್ರ ಹೆಗ್ಗಡೆಯವರನ್ನು ತೇಜೋವಧೆ ಮಾಡುವಂತಹ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗ ವಾಗಿ ಹೇಳುವ ಮೂಲಕ ಜನಸಾಮಾನ್ಯರಲ್ಲಿ ಗೊಂದಲ ಉಂಟು ಮಾಡಿದ್ದಾರೆ. ಆದರೆ ಸೌಜನ್ಯ ಹೋರಾಟದ ನೆಪದಲ್ಲಿ ಶಾಂತಿಯನ್ನು ಕದಡಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರವನ್ನು ಕಾರ್ಕಳದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದು ಮನವಿ ಸಮಿತಿ ತಿಳಿಸಿದೆ.
ಮುನವಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಹಾಗೂ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಸುರೇಶ್ ಶೆಟ್ಟಿ ಶಿವಪುರ, ರವೀಂದ್ರ ಮಡಿವಾಳ, ಅಂಥೋನಿ ಡಿಸೋಜ, ಸುಭಾಷ್‌ಚಂದ್ರ ಚೌಡ, ಶೀತಲ್ ಜೈನ್, ಆಕಾಶ್‌ರಾಜ್ ಜೈನ್, ಲಲಿತಾ ಮೊದಲಾದವರು ಉಪಸ್ಥಿತರಿದ್ದರು.
"ನ್ಯಾಯಾಲಯದ ಆದೇಶದ ಬಳಿಕ ತಿಮರೋಡಿ ಹಾಗೂ ಅವರ ತಂಡ ಯಾವುದೇ ಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರೆ ಆ ಬಗ್ಗೆ ಲಿಖಿತ ವಾಗಿ ದೂರು ಕೊಡಿ. ನಾವು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಅದೇ ರೀತಿ ಮುಂದಿನ ಸಭೆಯಲ್ಲಿ ಯಾವುದೇ ರೀತಿಯಲ್ಲೂ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗದಂತೆ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು".
-ಡಾ.ಕೆ.ಅರುಣ್, ಎಸ್ಪಿ, ಉಡುಪಿ