ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಸೌಜನ್ಯಾ ಪರ ಹೋರಾಟಗಾರ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆ.23ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿ.ಎಲ್.ಸಂತೋಷ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಗ್ರಾಮಾಂತರ ಬಿಜಿಪಿ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಪೊಲೀಸ್ ದೂರು ನೀಡಿದ್ದರು.
ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಬ್ರಹ್ಮಾವರ ಠಾಣಾ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಎರಡು ಬಾರಿ ನೋಟಿಸ್ ಕಳುಹಿಸಿದ್ದರೆನ್ನಲಾಗಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣಾ ಪೊಲೀಸರು ಗುರುವಾರ ಬೆಳಗ್ಗೆ ಉಜಿರೆಯ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿಯ ಮನೆಗೆ ತೆರಳಿ ಅವರನ್ನು ಠಾಣೆಗೆ ಕರೆದೊಯ್ದಿದ್ದರು. ಬಳಿಕ ವಶಕ್ಕೆ ಪಡೆದು ಉಡುಪಿ ಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ವಿಚಾರಣೆ ನಡೆಸಿದರು. ಸಂಜೆಯ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿದ ಬಳಿಕ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.







