ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಬ್ರಹ್ಮಾವರ ಠಾಣೆಯಲ್ಲಿ ತಿಮರೋಡಿ ಸುದೀರ್ಘ ವಿಚಾರಣೆ; ಬಂಧನ

ಬ್ರಹ್ಮಾವರ, ಆ.21: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಜಿಲ್ಲಾ ಪೊಲೀಸರು ಅಪರಾಹ್ನ 1:25ರ ಸುಮಾರಿಗೆ ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ಉಜಿರೆಯ ಅವರ ಮನೆಯಿಂದ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಬೆಳ್ತಂಗಡಿಯಲ್ಲಿರುವ ತಿಮರೋಡಿ ನಿವಾಸಕ್ಕೆ ಗುರುವಾರ ಬೆಳಗ್ಗಿನ ಜಾವವೇ 9ಕ್ಕೂ ಅಧಿಕ ವಾಹನಗಳಲ್ಲಿ ತೆರಳಿದ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲು ಯತ್ನಿಸಿದ್ದು, ಮಾತಿನ ಚಕಮಕಿ ಯ ಬಳಿಕ ಕೊನೆಗೂ ವಿಚಾರಣೆಗೆ ಹಾಜರಾಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ತಿಮರೋಡಿ ಅವರು ತಮ್ಮ ಖಾಸಗಿ ವಾಹನದಲ್ಲಿ ಗಿರೀಶ್ ಮಟ್ಟಣನವರ್ ಹಾಗೂ ವಕೀಲರ ಜೊತೆ ಕಾರ್ಕಳ ಮಾರ್ಗವಾಗಿ ಬ್ರಹ್ಮಾವರ ಠಾಣೆಗೆ ಆಗಮಿಸಿದ್ದರು. ಪೊಲೀಸರು ಅವರನ್ನು ನೇರ ಮಾರ್ಗದಲ್ಲಿ ಕರೆ ತರದೇ ಒಳಮಾರ್ಗದಲ್ಲಿ ತಿಮರೋಡಿ ಅವರನ್ನು ಠಾಣೆಗೆ ಕರೆ ತಂದರು.
ಬ್ರಹ್ಮಾವರ ಠಾಣೆಯಲ್ಲಿ ತನಿಖಾಧಿಕಾರಿಯಾಗಿದ್ದ ಬ್ರಹ್ಮಾವರ ಠಾಣಾಧಿಕಾರಿ ಅಶೋಕ ಮಾಳಗಿ ಅವರು ಸುಮಾರು ಎರಡೂವರೆ ಗಂಟೆಗಳ ಕಾಲ ತಿಮರೋಡಿ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಕೊನೆಯಲ್ಲಿ ತಿಮರೋಡಿ ಅವರನ್ನು ಬಂಧಿಸಿದ ಪೊಲೀಸರು ಸಂಜೆ 4:20ರ ಸುಮಾರಿಗೆ ಕೋರ್ಟಿಗೆ ಹಾಜರು ಪಡಿಸಲು ಪೊಲೀಸ್ ಸ್ಟೇಶನ್‌ನಿಂದ ಕರೆತಂದರು.
ಪೊಲೀಸ್ ವಾಹನದಲ್ಲಿ ತಿಮರೋಡಿ ಅವರನ್ನು ಬಸ್ ನಿಲ್ದಾಣದ ಬಳಿ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಪೊಲೀಸರು ಅಲ್ಲಿ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿದರು. ತಿಮರೋಡಿ ಅವರಲ್ಲಿ ಹೈಬಿಪಿ ಕಂಡುಬಂದಿದ್ದು, ಇಸಿಜಿ ಪರೀಕ್ಷೆಯನ್ನೂ ನಡೆಸಲಾಯಿತು. ಅವರ ರಕ್ತದೊತ್ತಡ ಕಡಿಮೆಯಾಗಲು ಕೆಲಹೊತ್ತು ಕಾಯುವಂತಾಯಿತು. ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂಬ ಷರಾದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ವರದಿ ನೀಡಿದರು.
ಬಳಿಕ ಸುಮಾರು 5:35ರ ಸುಮಾರಿಗೆ ತಿಮರೋಡಿ ಅವರನ್ನು ಪಕ್ಕದಲ್ಲೇ ಇರುವ ಬ್ರಹ್ಮಾವರ ಸಂಚಾರಿ ಪೀಠದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಎನ್.ಎ. ಅವರ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆಯ ಬಳಿಕ ನ್ಯಾಯಾಧೀಶರು ಸಂಜೆ 6:15ರ ಸುಮಾರಿಗೆ ತಿಮರೋಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪು ನೀಡಿದರು.
ಬಿಗು ಭದ್ರತೆ, ನಿಷೇಧಾಜ್ಞೆ: ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆತರುವ ಹಿನ್ನೆಲೆಯಲ್ಲಿ ಠಾಣೆಯ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಬ್ರಹ್ಮಾವರ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆಗೆ ಬರುವ ಮಾರ್ಗವೂ ಸೇರಿದಂತೆ ಠಾಣೆಯ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ಬ್ಯಾರಿಕೇಡ್‌ಗಳನ್ನು ಇರಿಸಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾ ಗಿತ್ತು. ಪತ್ರಕರ್ತರನ್ನು ಸಹ ವಿಚಾರಣೆಯ ಬಳಿಕ ಬಿಡಲಾಗುತ್ತಿತ್ತು.
ಇದೇ ವೇಳೆ ಬಸ್ ನಿಲ್ದಾಣದ ಬಳಿ ತಿಮರೋಡಿ ಪರ ಗುಂಪು ಹಾಗೂ ಧರ್ಮಸ್ಥಳ ಭಕ್ತರ ಗುಂಪು ಒಟ್ಟು ಸೇರಿದ್ದು ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದರು. ತಿಮರೋಡಿಯನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಠಾಣಾ ಸುತ್ತಲಿನ 500ಮೀ. ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರನ್ವಯ ಆ.21ರ ಅಪರಾಹ್ನ 1:00ರಿಂದ ಆ.22ರ ಅಪರಾಹ್ನ 1:00ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಆದೇಶ ಹೊರಡಿಸಿದರು. ನಿಷೇಧಾಜ್ಞೆಯ ಕುರಿತಂತೆ ಮೈಕ್ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.
ಮಾತಿನ ಚಕಮಕಿ: ಇದಕ್ಕೆ ಮುನ್ನ ಬ್ರಹ್ಮಾವರ ಪೊಲೀಸ್ ಠಾಣೆಯ ಮುಂಭಾಗ ಸೌಜನ್ಯ ಪರ ಹೋರಾಟಗಾರ ದಿನೇಶ್ ಗಾಣಿಗ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಠಾಣೆ ಒಳಪ್ರವೇಶಕ್ಕೆ ಮುಂದಾದ ಸೌಜನ್ಯ ಪರ ಹೋರಾಟಗಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿತ್ತು.
ಎಎಸ್ಪಿ ಹರ್ಷ ಪ್ರಿಯಂವದ, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಸಹಿತ ಹಿರಿಯ ಅಧಿಕಾರಿಗಳು ಹಾಜರಿದ್ದು, ಬಂದೋಬಸ್ತ್‌ನ ಮೇಲುಸ್ತುವಾರಿ ನಡೆಸಿದರು.
ಧಿಕ್ಕಾರ ಕೂಗಿದ ಭಕ್ತರು: ಪೊಲೀಸರು ಪೊಲೀಸ್ ವಾಹನದಲ್ಲಿ ತಿಮರೋಡಿ ಅವರನ್ನು ಆಸ್ಪತ್ರೆಗೆ ಕರೆತರುವಾಗ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಧರ್ಮಸ್ಥಳದ ಭಕ್ತರು ಒಟ್ಟು ಸೇರಿ ತಿಮರೋಡಿ ವಿರುದ್ಧ ಧಿಕ್ಕಾರ ಕೂಗಿದರು. ಕ್ಷೇತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ತಿಮರೋಡಿಯನ್ನು ಬಂಧಿಸುವಂತೆ ಈ ಗುಂಪು ಆಗ್ರಹಿಸಿತು.
ಗುಂಪು ತಿಮರೋಡಿ ಧಿಕ್ಕಾರ ಘೋಷಣೆ ಕೂಗುತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಿದರು.
ಬಂಧನಕ್ಕೆ ಕಾರಣ: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಜಾಮೀನು ರಹಿತ ಪ್ರಕರಣವಿದೆ. ಇಲಾಖೆಯಿಂದ ನೀಡಿದ ಎರಡು ನೋಟಿಸ್‌ಗೆ ಅವರು ಉತ್ತರ ನೀಡಿಲ್ಲ. ಈತ ಪುನರಾವರ್ತಿತ ಆರೋಪಿ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ಪಷ್ಟೀಕರಣ ನೀಡಿದ್ದಾರೆ.







