ಜಮೀನಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯ ನಿಗದಿ ಪಡಿಸಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ

ಉಡುಪಿ, ಫೆ.17: ಕಾರ್ಕಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಪ್ರಸ್ತುತ ಇರುವ ಮಾರುಕಟ್ಟೆ ಮೌಲ್ಯವನ್ನು ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ, ಬಜಗೋಳಿ, ಮಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಸಮಾಲೋಚನೆಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡುತಿದ್ದರು.
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಮನೆ, ಕೃಷಿ ಜಮೀನು, ಮರಮಟ್ಟು ಸೇರಿದಂತೆ ವಿವಿಧ ಸ್ವತ್ತುಗಳನ್ನು ಅಧಿಕಾರಿಗಳು ನಿಖರವಾಗಿ ಪರಿವೀಕ್ಷಣೆ ಮಾಡಿ, ನೈಜತೆಗೆ ಅನುಗುಣವಾಗಿ ಈಗಿರುವ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾ.ಹೆ.169 ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ಭೂಮಾಲಕರಿಗೆ ವೈಜ್ಞಾನಿಕ ಮೌಲ್ಯ ನಿಗದಿ ಪಡಿಸಿ ಪರಿಹಾರ ಹಣ ನೀಡುವಂತೆ ಹೇಳಿದರು.
ರಾ.ಹೆದ್ದಾರಿ 169ರ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸ್ಥಳೀಯ ಜನರು ಅನೇಕ ವರ್ಷಗಳಿಂದ ವಾಸವಿರುವ ತಮ್ಮ ಮನೆ ಹಾಗೂ ಕೃಷಿ ಜಮೀನನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡುತಿದ್ದಾರೆ. ಹೀಗಾಗಿ ಅವರಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರದ ಹಣವನ್ನು ನೀಡಿದಲ್ಲಿ ಅವರು ತಮ್ಮ ಮುಂದಿನ ಭವಿಷ್ಯ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. ಇದಕ್ಕೆ ಒತ್ತು ನೀಡಬೇಕು ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವ ಮೂಲಕ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಸಂಸದರು ಸೂಚಿಸಿದರು.
ಮಲ್ಪೆ - ಕರಾವಳಿ ಜಂಕ್ಷನ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸುವುದರೊಂದಿಗೆ ಶೀಘ್ರವೇ ಪೂರ್ಣಗೊಳಿಸಿ, ಹೆದ್ದಾರಿ ಕಾಮಗಾರಿ ಗಳನ್ನು ಕೈಗೊಳ್ಳಬೇಕು ಎಂದರು.
ಕಾರ್ಕಳ ಶಾಸಕ ಸುನಿಲ್‌ಕುಮಾರ್ ಮಾತನಾಡಿ, ಭೂಸ್ವಾಧೀನಕ್ಕೆ ಒಳಗಾಗಿರುವ ಮನೆ ಅಥವಾ ಭೂಮಿಯ ಮಾಲಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ಹಣವನ್ನು ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿ 169ಕ್ಕೆ ನೆರೆಯ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ನೀಡಿರುವ ಪರಿಹಾರ ಹಣ ಹೆಚ್ಚಿದೆ. ಒಂದೇ ರಸ್ತೆಯ ಭೂಸ್ವಾಧೀನದಲ್ಲಿ ಪರಿಹಾರ ಹಣ ವ್ಯತ್ಯಾಸದಿಂದ ಭೂ ಮಾಲಕರಿಗೆ ಗೊಂದಲ ಉಂಟಾಗಿದೆ. ಅಧಿಕಾರಿಗಳು ಕಾನೂನಿನ ಅನ್ವಯ ಪರಿಹಾರದ ಮೊತ್ತವನ್ನು ನಿಗದಿಗೊಳಿಸಿ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಡಿಎಫ್‌ಓ ರುಥ್ರೇನ್ ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಸಹಾಯಕ ಕಮಿಷನರ್ ರಶ್ಮಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರರು, ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಭಿಯಂತರರು, ಗುತ್ತಿಗೆದಾರರು ಹಾಗೂ ಇತರರು ಉಪಸ್ಥಿತರಿದ್ದರು.






