ನ.16ರಂದು ಮೂತ್ರಪಿಂಡ ರೋಗಿಗಳಿಗೆ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ
ಉಡುಪಿ, ನ.11: ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ ಉಡುಪಿ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಉದ್ಯಮಿ ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಬೆಸಿಲ್ ಪಿಂಟೊ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ಉದ್ಘಾಟನೆ ನ.16ರಂದು ರವಿವಾರ 11 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಹಿರಿಯ ವೈದ್ಯರಾದ ಡಾ. ಮೇಘಾ ಪೈ ಗೌರವ ಅತಿಥಿಗಳಾಗಿ ಹೆಸರಾಂತ ವಾಗ್ಮಿ ರಫೀಕ್ ಮಾಸ್ಟರ್, ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಉದ್ಯಮಿ ಜೊಸೇಫ್ ಎಲಿಯಾಸ್ ಮಿನೇಜಸ್ ಭಾಗವಹಿಸಲಿದ್ದಾರೆ.
ಉಡುಪಿ ಜಿಲ್ಲಾ ವ್ಯಾಪ್ತಿಯ ನಿಗದಿತ ಅಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಕಲ್ಯಾಣಪುರ ಸಂತೆಕಟ್ಟೆಯ ಗೊರೆಟ್ಟಿ ಆಸ್ಪತ್ರೆ ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಮತ್ತು ಕುಂದಾಪುರದ ನಿಗದಿತ ಆಸ್ಪತ್ರೆಗಳಿಗೆ ಕೂಡ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಅಗತ್ಯವಿರುವ ಬಡ ರೋಗಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ ಎಲ್ಲಾ ಧರ್ಮ ಮತ್ತು ವರ್ಗದವರಿಗೂ ಕೂಡ ಲಭ್ಯವಿದ್ದು, ಸ್ಥಳೀಯ ಚರ್ಚಿನ ಕಥೊಲಿಕ್ ಸಭಾ ಘಟಕದ ಶಿಫಾರಸು ಅರ್ಜಿಯೊಂದಿಗೆ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಡಯಾಲಿಸಿಸ್ ರೋಗಿಗಳಿಗೆ ಯೋಜನೆಗೆ ನೊಂದಣಿಯಾದ ಬಳಿಕ ಅಧಿಕೃತ ಗುರುತು ಪತ್ರ ನೀಡಲಾಗುತ್ತಿದ್ದು ಅದರ ಆಧಾರದಲ್ಲಿ ನಿರಂತರವಾಗಿ ಶೇ.50 ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ. ಡಯಾಲಿಸಿಸ್ ಸೇವೆಗೆ ತಗುಲುವ ಉಳಿದ ಶೇ.50 ವೆಚ್ಚವನ್ನು ರೋಗಿಗಳು ಭರಿಸಬೇಕಾಗಿದೆ.ಉಳಿದ 50% ವೆಚ್ಚವನ್ನು ಜೋಸೆಫ್ ಮಿನೇಜಸ್ ಮತ್ತು ಅವರ ತಂಡ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಮುಖಾಂತರ ಆಸ್ಪತ್ರೆಗಳಿಗೆ ಭರಿಸಲಿದೆ ಎಂದವರು ತಿಳಿಸಿದ್ದಾರೆ.







