ಉಡುಪಿ ಜಿಲ್ಲೆಯಲ್ಲಿ ಅಕ್ಕ ಪಡೆ ಯೋಜನೆಗೆ ಜಿಲ್ಲಾಧಿಕಾರಿ ಚಾಲನೆ

ಉಡುಪಿ, ಜ.3: ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯ ಸರಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ‘ಅಕ್ಕಪಡೆ ಯೋಜನೆ’ಯನ್ನು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನ ಗೊಳಿಸಲಾಗಿದ್ದು, ಇದು ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ಅಭಯದೊಂದಿಗೆ ರಕ್ಷಣೆ ನೀಡುವುದಲ್ಲದೇ, ಭಯಮುಕ್ತ ವಾತಾವರಣ ವನ್ನೂ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಅಪರಾಹ್ನ ಅಕ್ಕ ಪಡೆ ಯೋಜನೆಯ ವಾಹನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸಲಿದ್ದು, ಹೆಣ್ಣು ಮಕ್ಕಳು ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾಗದಂತೆ ಅವರುಗಳಿಗೆ ಸುರಕ್ಷತಾ ಭಾವನೆ ಮೂಡಿಸಿ, ಸ್ವತಂತ್ರವಾಗಿ ಬದುಕಲು ಧೈರ್ಯ ತುಂಬಿಸುವ ಕೆಲಸವನ್ನು ಮಾಡಲಿದೆ. ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಹಾಗೂ ಅವರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸಲಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ಕಪಡೆಗೆ ಚಾಲನೆ ನೀಡಲಾಗಿದ್ದು, ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಹಾಗೂ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಹಾಯಹಸ್ತ ನೀಡುವುದರೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಿದ್ದಾರೆ ಎಂದರು.
ತರಬೇತಿ ಹೊಂದಿದ ಅಕ್ಕಪಡೆಯ ಸದಸ್ಯರು ಶಾಲಾ-ಕಾಲೇಜು, ಬಸ್/ರೈಲ್ವೆ ನಿಲ್ದಾಣಗಳು, ದೇವಸ್ಥಾನ, ಬಾಲಕಿಯರು ಮತ್ತು ಮಹಿಳೆಯರ ಹಾಸ್ಟಲ್, ಪಿಜಿ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಗಸ್ತು ತಿರುಗುವು ದರೊಂದಿಗೆ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಾಗೂ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಅಕ್ಕ ಪಡೆಯ ವಾಹನದಲ್ಲಿ 4 ಮಂದಿ ತರಬೇತಾದ ಗೃಹ ರಕ್ಷಕಿಯರು ಮತ್ತು ಪೊಲೀಸ್ ಇಲಾಖೆಯ ಒಬ್ಬರು ಡ್ರೈವರ್ ಅನ್ನು ನಿಯೋಜಿಸಲಾಗಿದೆ. ಇವರು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ, ಸ್ವರಕ್ಷಣೆ ಕಾರ್ಯವಿಧಾನ, ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸುವ ಬಗ್ಗೆ, ಫೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ ಎಂದ ಅವರು, ಪೊಲೀಸ್ ವಾಹನಗಳಲ್ಲಿ ರುವಂತೆ ಅಕ್ಕಪಡೆ ವಾಹನದಲ್ಲಿಯೂ ವೈರ್‌ಲೆಸ್ ಸೆಟ್‌ಗಳನ್ನು ಅಳವಡಿ ಸಲಾಗಿದೆ. ತುರ್ತು ಕರೆಗಳಿಗೆ ಆದ್ಯತೆಯ ಮೇಲೆ ಸ್ಪಂದಿಸಲಿದ್ದಾರೆ ಎಂದರು.
ಕಳೆದ ಹೊಸ ವರ್ಷದ ಸಂದರ್ಭದಲ್ಲಿ ಅಕ್ಕಪಡೆಯನ್ನು ಪ್ರಾಯೋಗಿಕವಾಗಿ ಮಲ್ಪೆ ಮತ್ತು ಮಣಿಪಾಲದಲ್ಲಿ ನಿಯೋಜಿಸಲಾಗಿತ್ತು. ಇವುಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಅಪರಾಧಗಳ ಪ್ರಮಾಣ ಕಡಿಮೆ ಮಾಡಲು ಇದೊಂದು ಉತ್ತಮ ಯೋಜನೆಯಾಗಿದೆ ಎಂದು ಹರಿರಾಮ್ ಶಂಕರ್ ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಗ್ಗೆ 7ರಿಂದ ಅಪರಾಹ್ನ 2 ಗಂಟೆ ಹಾಗೂ ಅಪರಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಎರಡು ಪಾಳಿಗಳಲ್ಲಿ ಈ ಪಡೆ ಕಾರ್ಯನಿರ್ವಸಲಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ 181 ಹಾಗೂ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡುವುದರ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳು ಅಕ್ಕಪಡೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಅಕ್ಕಪಡೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪ್ರಭಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧ ಹಾದಿಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.







