ಡಾ.ಜಿ.ಭಾಸ್ಕರ ಮಯ್ಯ ವ್ಯಕ್ತಿ, ಕೃತಿ ಗ್ರಂಥ ಬಿಡುಗಡೆ
ಉಡುಪಿ, ಜು.29: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಗುಂಡ್ಮಿ ಜನವಾದಿ ಪ್ರಕಾಶನ, ಉಡುಪಿ ರಥಬೀದಿ ಗೆಳೆಯರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಡಾ.ಜಿ.ಭಾಸ್ಕರ ಮಯ್ಯ ವ್ಯಕ್ತಿ, ಕೃತಿ ಗ್ರಂಥ ಬಿಡುಗಡೆ ಸಮಾರಂಭವು ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಶನಿವಾರ ಜರಗಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಲೇಖಕಿ ಡಾ.ಮಾಧವಿ ಭಂಡಾರಿ ಮಾತನಾಡಿ, ಭಾಸ್ಕರ ಮಯ್ಯ ಅವರು ಮಾತು ಮತ್ತು ಮೌನ ಎರಡನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾವು ಮಾತನಾಡಬೇಕಾದಲ್ಲಿ ಮೌನವಾಗಿ, ಮೌನವಾಗಿರಬೇಕಾದಲ್ಲಿ ಮಾತನಾಡಿ ಎಡವಟ್ಟು ಮಾಡಿಕೊಳ್ಳು ತ್ತೇವೆ. ಆದರೆ ಮಯ್ಯ ಅವರು ಮೌನವನ್ನು ಗುರಾಣಿಯನ್ನಾಗಿ ಬಳಿಕೊಂಡವ ರಲ್ಲ. ಅವರ ಮೌನವು ಬಿರುಗಾಳಿ ಬೀಸುವ ಮುನ್ನ ಆವರಿಸುವ ಸ್ಥಬ್ಧತೆ ಇದ್ದಂತೆ. ಅಂತಹ ವ್ಯಕ್ತಿತ್ವವನ್ನು ಭಾಸ್ಕರ ಮಯ್ಯ ಹೊಂದಿದ್ದಾರೆ. ಅವರು ಬರೆದ ಕೃತಿಗಳು ಅವರನ್ನು ಅಮರರನ್ನಾಗಿಸಿವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ, ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿದ್ದರು. ಕೃತಿಯ ಸಂಪಾದಕ ಡಾ.ರಾಘವೇಂದ್ರ ರಾವ್, ಜನವಾದಿ ಪ್ರಕಾಶನದ ಕಮಲಾ ಮಯ್ಯ ಮಾತನಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಉಪನ್ಯಾಸಕ ಡಾ.ಕೃಷ್ಣರಾಜ್ ಕರಬ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.