ಡಾ.ಕಾರಂತರು ಯಕ್ಷಗಾನದ ಮೂಲಕ ವಿಶ್ವದ ಗಮನ ಸೆಳೆದರು: ಡಾ.ಬಾಲಾಜಿ ಎಸ್.

ಉಡುಪಿ: ಜಾನಪದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ಇತಿಮಿತಿಗಳಿಲ್ಲ. ಜಾನಪದವನ್ನು ಉಳಿಸಿ ಬೆಳೆಸುವುದು ಯುವ ಜನತೆಯ ಜವಾಬ್ದಾರಿ. ಡಾ. ಶಿವರಾಮ ಕಾರಂತರು ಸ್ವತಃ ಯಕ್ಷಗಾನವನ್ನು ಪ್ರದರ್ಶನ ಮಾಡುವ ಮೂಲಕ ವಿಶ್ವದ ಗಮನ ಸೆಳೆದರು ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಎಸ್ ಹೇಳಿದ್ದಾರೆ.
ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಕಾಲೇಜಿನ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-೫ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಡಾ.ಶಿವರಾಮ ಕಾರಂತರು ತಮ್ಮ ಬರಹಗಳ ಮೂಲಕ ಕರಾವಳಿಯ ಸಂಸ್ಕೃತಿ ಮಾತ್ರವಲ್ಲದೇ ಅದರೊಂದಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದವರು. ಕಾರಂತರ ಕುರಿತ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದೇ ಡಾ. ಶಿವರಾಮ ಕಾರಂತ ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.
ಚಿಂತಕ ಮುಷ್ತಾಕ್ ಹೆನ್ನಾಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಡಾ. ಶಿವರಾಮ ಕಾರಂತರ ಬದುಕು, ಕೃತಿಗಳು ಮತ್ತು ಪರಿಸರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಡಾ.ಶಿವರಾಮ ಕಾರಂತರು ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರದ ಕುರಿತು ವಿಶೇಷ ಕಾಳಜಿ ಹೊಂದಿದ್ದರು. ಸಮಾಜವನ್ನು ಜಾಗೃತಿಗೊಳಿಸುವಲ್ಲಿ ಕಾರಂತರ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಖ್ಯಾತ ಜಾನಪದ ವಿದ್ವಾಂಸ ಪ್ರೊ.ಕನರಾಡಿ ವಾದಿರಾಜ್ ಭಟ್ ಜಲ ಜಾನಪದ ಪುಸ್ತಕ ಬಿಡುಗಡೆಗೊಳಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯೆ ಡಾ. ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾ. ಪ್ರಸಾದ್ ರಾವ್, ಜಲ ಜಾನಪದ ಕೃತಿಯ ಸಂಪಾದಕ ಮಂಡಳಿಯ ಸದಸ್ಯರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾ.ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಶೆಟ್ಟಿ ವಂದಿಸಿದರು.







