ಡಾ.ಕಾರಂತರು ವಿಜ್ಞಾನ, ಕಲೆ, ಸಾಹಿತ್ಯದ ಸಂಗಮ: ಡಾ. ಐತಾಳ್

ಉಡುಪಿ, ಡಿ.24: ಡಾ.ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಮಕ್ಕಳೊಂದಿಗೆ ಬೆರೆತು ಅವರನ್ನು ತಿದ್ದಿ-ತೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದ ನಿದರ್ಶನವಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಕಾರಂತರು ವಿಜ್ಞಾನ, ಕಲೆ, ಸಾಹಿತ್ಯಗಳ ಸಂಗಮವಾಗಿದ್ದರು ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿ ಕಾರಿ ಡಾ.ರಾಧಾಕೃಷ್ಣ ಎಸ್ ಐತಾಳ್ ಹೇಳಿದ್ದಾರೆ.
ಇನ್ನಂಜೆಯ ಎಸ್.ವಿ.ಎಚ್ ಕನ್ನಡ ಮಾಧ್ಯಮ ಪ್ರೌಢ ಶಾಲಾ ಸಭಾಂಗಣ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಶಾಲೆ ಸಹಯೋಗದಲ್ಲಿ ‘ಮಕ್ಕಳಿಗಾಗಿ ಕಾರಂತರು-3’ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಡಾ.ಕಾರಂತರ ಪರಿಚಯ ರಂಗವಲ್ಲಿಯ ಮೂಲಕ ಕಾರ್ಯಕ್ರಮದಲ್ಲಿ ಖ್ಯಾತ ರಂಗವಲ್ಲಿ ಕಲಾವಿದೆ ಡಾ.ಭಾರತಿ ಮರವಂತೆ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಬಾಲ ಪ್ರಪಂಚ, ಪ್ರಾಣಿ ಪ್ರಪಂಚ, ಪಕ್ಷಿಗಳ ಅದ್ಭುತ ಲೋಕ ಪುಸ್ತಕದಲ್ಲಿರುವ ಚಿತ್ರಗಳನ್ನು ರಂಗವಲ್ಲಿಯಲ್ಲಿ ಬಿಡಿಸುವ ವಿಶಿಷ್ಟ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲೆಯನ್ನು ಪುನರುಜ್ಜೀವನ ಗೊಳಿಸಿದ ಕೀರ್ತಿ ಡಾ.ಶಿವರಾಮ ಕಾರಂತರಿಗೆ ಸಲ್ಲುತ್ತದೆ. ಅವರ ಬರಹ-ಬದುಕು ಇಂದಿನ ಯುವ ಪೀಳಿಗೆಗೆ ಮಾದರಿ. ಕಾರಂತರ ಪುಸ್ತಕಗಳ ಓದುವಿಕೆ ಬದುಕಿಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದ ಡಾ.ಐತಾಳ್, ರಂಗವಲ್ಲಿಯ ಮೂಲಕ ಡಾ.ಶಿವರಾಮ ಕಾರಂತರನ್ನು ಮಕ್ಕಳಿಗೆ ಪರಿಚಯಿಸುವ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮ ಉತ್ತಮ ಅವಕಾಶ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಮಾನಸಿಕ ಆರೋಗ್ಯಕ್ಕೆ ಕಲೆ ಮತ್ತು ಸಾಹಿತ್ಯ ಅದ್ಭುತ ಕೊಡುಗೆಯನ್ನು ನೀಡುತ್ತದೆ. ಓದಿನ ಹವ್ಯಾಸ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಪುಸ್ತಕಗಳ ಓದುವಿಕೆಯ ಕುರಿತು ಆಸಕ್ತಿ ಬೆಳೆಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯೆ ಡಾ.ಭಾರತಿ ಮರವಂತೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇನ್ನಂಜೆ ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ನಿವೃತ್ತ ಶಿಕ್ಷಕ ಸತ್ಯ ಸಾಯಿ ಪ್ರಸಾದ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್ ಉಪಾಧ್ಯಾಯ ಸ್ವಾಗತಿಸಿ, ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ವಂದಿಸಿದರು.







