ಡಾ.ರವಿ ಕೋರಿಸೆಟ್ಟರ್‌ಗೆ ‘ಆದಿಮ ಕಲಾರತ್ನ’ ರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಫೆ.26: ಆದಿಮ ಕಲಾ ಟ್ರಸ್ಟ್ ಉಡುಪಿ, ತನ್ನ ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಪ್ರಖ್ಯಾತ ಭಾರತೀಯ ಪುರಾತತ್ತ್ವ ವಿದ್ವಾಂಸ ಡಾ. ರವೀಂದ್ರ ಕೋರಿಸೆಟ್ಟರ್ ಅವರನ್ನು ಪ್ರಥಮ ‘ಆದಿಮ ಕಲಾರತ್ನ’ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿ 25,000ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ರವಿ ಕೋರಿಸೆಟ್ಟರ್ ಎಂದೇ ಜನಪ್ರಿಯರಾಗಿರುವ ಡಾ.ರವೀಂದ್ರ ಕೋರಿ ಸೆಟ್ಟರ್, ನಮ್ಮ ನಡುವಿನ ಅಂತಾರಾಷ್ಟ್ರೀಯ ಖ್ಯಾತಿಯ ಪುರಾತತ್ತ್ವ ವಿದ್ವಾಂಸ ಹಾಗೂ ಹೆಮ್ಮೆಯ ಕನ್ನಡಿಗ. ದೇಶವ್ಯಾಪಿ ಪುರಾತತ್ತ್ವ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ರವಿ ಕೋರಿಸೆಟ್ಟರ್, ದಣಿವರಿಯದ ಯುವಕ.
1952ರ ಜು.8ರಂದು ಕೆ.ಎಸ್. ಮರಿಸ್ವಾಮಿ ಮತ್ತು ಶಾರದಾ ದಂಪತಿಗಳ ಪುತ್ರರಾಗಿ ಹೊಸಪೇಟೆಯಲ್ಲಿ ಹುಟ್ಟಿದ ಇವರು, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸ್ನಾತಕೋತ್ತರ ಮತ್ತು ಪಿ.ಹೆಚ್‌ಡಿ ಪದವಿಯನ್ನು ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪುರಾತತ್ತ್ವ ಶಾಸ್ತ್ರದ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ನಿವೃತ್ತಿಯ ನಂತರವೂ ವಿವಿಧ ಅಧ್ಯಯನ ಪೀಠಗಳ ಮುಖ್ಯಸ್ಥರಾಗಿ, ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗನಕಲ್ಲು ಉತ್ಖನನ ಇವರ ಬಹುಮುಖ್ಯ ಕೊಡುಗೆಗಳಲ್ಲಿ ಒಂದು. ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಪುರಾತತ್ತ್ವ ವಸ್ತು ಸಂಗ್ರಹಾಲಯ ಅವರ ಕನಸಿನ ಕೂಸು.
ಪ್ರಶಸ್ತಿ ಪ್ರದಾನ ಸಮಾರಂಭ: ಉಡುಪಿ ಅದಿಮ ಕಲಾ ಟ್ರಸ್ಟ್‌ನ ಆಶ್ರಯದಲ್ಲಿ ಅದಿಮ ಕಲಾ ಟ್ರಸ್ಟಿನ ಪ್ರಥಮ ವಾರ್ಷಿಕೋತ್ಸವ, ಅದಿಮ ಕಲಾ ಪ್ರಕಾಶನದ ಉದ್ಘಾಟನೆ, ಕರ್ನಾಟಕ ಕರಾವಳಿಯ ಅದಿಮ ಕಲೆ ಕೃತಿಯ ಬಿಡುಗಡೆ, ಬಹುಮಾನ ವಿತರಣೆ ಹಾಗೂ ಅದಿಮ ಕಲಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 1ರಂದು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದು ಉಡುಪಿ ಅದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸುವ ಟ್ರಸ್ಟ್‌ನ ಅಧ್ಯಕ್ಷ ಡಾ.ರಾಜೇಂದ್ರ ಕೇರ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿ ದ್ದಾರೆ. ಉಪಾಧ್ಯಕ್ಷ ಯೂಸುಫ್ ಹೈದರ್ ಡಾ.ರವಿ ಕೋರಿಸೆಟ್ಟರ್‌ಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಲ್ಕಿ ಗಜನಿ ಫೌಂಡೇಷನ್‌ನ ಅಧ್ಯಕ್ಷ ಡಾ.ಸುರೇಶ್ ಎಸ್.ಕೋಟ್ಯಾನ್ ಅವರು ಅದಿಮ ಕಲಾ ಪ್ರಕಾಶನವನ್ನು ಉದ್ಘಾಟಿಸಿ ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ. ಗುಳ್ಳಾಡಿ ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ ಅಧ್ಯಕ್ಷ ಡಾ.ರಘುರಾಮ ಶೆಟ್ಟಿ ಗುಳ್ಳಾಡಿ ಬಹುಮಾನ ವಿತರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಇತಿಹಾಸ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು. ಹಾಗೂ ಕರಾವಳಿ ಕರ್ನಾಟಕದ ಪುರಾತತ್ತ್ವ ಎಂಬ ಪೋಟೊ ಪ್ರದರ್ಶನವೂ ನಡೆಯಲಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.






