ರಾಜ್ಯದಾದ್ಯಂತ 569 ಸನ್ನದುಗಳನ್ನು ಇ-ಹರಾಜು: ಬಾಲಕೃಷ್ಣ ಸಿ.ಎಚ್.

ಉಡುಪಿ, ಜ.6: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಸಿರುವಂತೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಿಸುವ ಭಾಗವಾಗಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ಸನ್ನದುಗಳನ್ನು ಇ-ಹರಾಜು ಮೂಲಕ ಹರಾಜು ಮಾಡಿ ರಾಜಸ್ವ ಸಂಗ್ರಹಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇರುವ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಿ ಸಂಭಾವ್ಯ ಬಿಡ್‌ದಾರರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್. ಹೇಳಿದ್ದಾರೆ.
ಅಬಕಾರಿ ಇಲಾಖೆ ವತಿಯಿಂದ ಐದು ವರ್ಷಗಳ ಮದ್ಯದ ಸನ್ನದುಗಳನ್ನು ಪಡೆಯಲು ಸಂಭಾವ್ಯ ಬಿಡ್‌ದಾರರರಿಗೆ ಮಂಗಳವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಬಕಾರಿ ಇಲಾಖೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಿಎಲ್-2ಎ ಮತ್ತು ಸಿಎಲ್-9ಎ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಪೋರ್ಟಲ್‌ನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು. ತರಬೇತಿ ಕಾರ್ಯಕ್ರಮದಲ್ಲಿ ಬಿಡ್‌ದಾರರಿಗೆ ಅಬಕಾರಿ ಇಲಾಖೆಯ ನಿಯಮಗಳು, ಇ-ಹರಾಜು ಪ್ರಕ್ರಿಯೆ, ಟೆಂಡರ್ ನಿರ್ವಹಣೆ, ಆನ್‌ಲೈನ್ ವ್ಯವಸ್ಥೆ ಬಳಕೆ, ಬಿಡ್ ಸಲ್ಲಿಸುವ ವಿಧಾನ, ಲೈಸೆನ್ಸ್ ಪಡೆಯುವ ಬಗ್ಗೆ ಸೇರಿದಂತೆ ಮತ್ತಿತರೆ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ 8 ಸಿಎಲ್-2ಎ ಸನ್ನದುಗಳನ್ನು ಸಾಮಾನ್ಯ ವರ್ಗಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಲ್-9ಎ ನ 1 ಹಾಗೂ ಸಿಎಲ್-2ಎ ನ 29 ಸೇರಿದಂತೆ ಒಟ್ಟು 30 ಸನ್ನದುಗಳನ್ನು ಸಾಮಾನ್ಯ ಹಾಗೂ ಎಸ್.ಸಿ/ಎಸ್.ಟಿ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ. ಯಶಸ್ವಿ ಬಿಡ್‌ದಾರರಾಗಿ ಹೊರಹೊಮ್ಮಲು 21 ವಷರ್ ಮೇಲ್ಪಟ್ಟ, ಕರ್ನಾಟಕದ ನಿವಾಸಿಗಳಾಗಿರುವ, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದ ನೋಂದಣಿಯಾದ ಬಿಡ್ ದಾರರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆಂದು ಅವರು ತಿಳಿಸಿದರು.
ಇ-ಹರಾಜಿನಲ್ಲಿ ಭಾಗವಸಲು ಈಗಾಗಲೇ ನೋಂದಣಿ ಪ್ರಕ್ರಿಯೆಗಳು ಆರಂಭವಾಗಿದ್ದು, ಜನವರಿ 13 ರಿಂದ 20 ರ ವರೆಗೆ ನೇರ ಹರಾಜು ನಡೆಯಲಿದೆ. ಉಡುಪಿಯಲ್ಲಿ ಜ.20ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹರಾಜು ನಡೆಯಲಿದ್ದು, ಬಿಡ್‌ದಾರರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಯಾವುದೇ ಭಾಗದಲ್ಲಿಯೂ ಸಹ ಹರಾಜು ಪ್ರಕ್ರಿಯೆಯಲ್ಲಿ ಭಾಗವಸಬಹುದಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಇ-ಹರಾಜು ಕುರಿತು ವಿಸತ್ತತ ಮಾಹಿತಿ ನೀಡಿದರು. ಉಡುಪಿಯ ಅಬಕಾರಿ ಉಪ ಆಯುಕ್ತ ಟಿ.ಎಂ.ಶ್ರೀನಿವಾಸ್, ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಬ್ರಿಜೇಶ್ ಹಾಗೂ ಸತ್ಯಸಾಯಿ, ಅಬಕಾರಿ ಅಧೀಕ್ಷಕರುಗಳು, ಇಲಾಖೆಯ ಅಧಿಕಾರಿಗಳು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿಡ್‌ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಪ್ರಭು ಗೌಡ ಪಾಟೀಲ್ ಸ್ವಾಗತಿಸಿದರು. ಮಂಗಳೂರು ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







