ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ : ಶಾಸಕ ಯಶ್‌ಪಾಲ್
ಎಸೆಸೆಲ್ಸಿ ಸಾಧಕ ವಿದ್ಯಾರ್ಥಿ ಹಾಗೂ ಶಾಲೆಗಳಿಗೆ ಅಭಿನಂದನೆ

ಉಡುಪಿ : ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ನೀಡುವ ಹೊಣೆ ಶಿಕ್ಷಕರ ಮೇಲಿದ್ದು, ಇದನ್ನು ಅವರು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ ಹೇಳಿದ್ದಾರೆ.
ಮಂಗಳವಾರ ನಗರದ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ, ಮಾರ್ಚ್ 2022-23 ಮತ್ತು 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಪಡೆದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವಂತೆ ಮಾಡುವ ಹಾಗೂ ಭವಿಷ್ಯದ ಕನಸನ್ನು ನನಸು ಮಾಡುವ ಶಕ್ತಿ ಶಿಕ್ಷಣಕ್ಕೆ ಇದೆ ಎಂದ ಅವರು, ಶಿಕ್ಷಣದಲ್ಲಿ ಜಿಲ್ಲೆ ಶಿಕ್ಷಣದ ಕಾಶಿ ಎಂದೇ ಹೆಸರುವಾಸಿಯಾಗಿದೆ. ಶಿಕ್ಷಣ ಹಾಗೂ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದವರು ನುಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ಪ್ರೌಢಶಾಲೆ ಗಳು ಸರಕಾರ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿದೆ. ಕೆಲ ಶಾಲೆಗಳಿಗೆ ಸಂಜೆಯ ವೇಳೆ ಅನಿರೀಕ್ಷತ ಭೇಟಿ ನೀಡಿದಾಗಲೂ ಸಹ ವಿದ್ಯಾರ್ಥಿಗಳು ಗಂಭೀರತೆಯಿಂದ ಅಧ್ಯಯನ ಮಾಡುವುದನ್ನು ಗಮನಿಸಿದ್ದು, ಜಿಲ್ಲೆಯ ಶೈಕ್ಷಣಿಕ ಮಟ್ಟ ಹೆಚ್ಚಿರಲು ಇಂತಹ ವಿಶೇಷ ತರಗತಿಗಳು ಸಹಕಾರಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಈ ತಿಂಗಳ ಅಂತ್ಯಕ್ಕೆ ಸೇವಾನಿವೃತ್ತಿ ಹೊಂದಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗಡೆ, ಶಿಕ್ಷಕರ ಸಂಘದ ಪ್ರತಿನಿಧಿ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸೈಂಟ್ ಸಿಸಿಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರೀತಿ ಸಿಸ್ಟರ್, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಇತರರು ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿಷಯ ಪರೀಕ್ಷಕ ನಾಗರಾಜ ಮೈರ್‌ಕೊಮೆ ವಂದಿಸಿದರು.
ಸ್ವಸ್ತಿ ಕಾಮತ್, ನಿಧಿ ಪೈ, ಸಾಯಿಸ್ಪರ್ಶಗೆ ಸನ್ಮಾನ :
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಸ್ವಸ್ತಿ ಕಾಮತ್, ನಿಧಿ ಪೈ ಹಾಗೂ ಸಾಯಿಸ್ಪರ್ಶ ಅವರನ್ನು ಸನ್ಮಾನಿಸಲಾಯಿತು. 2022-23 ಮತ್ತು 2023-24ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಜಿಲೆಯ 147 ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳಿಗೆ ನಗದು ಹಾಗೂ ಸ್ಮರಣಿಕೆಯನ್ನು ನೀಡಿ ಗೌರಸಲಾಯಿತು.
ಬ್ರಹ್ಮಾವರ ತಾಲೂಕು ಮಟ್ಟದಲ್ಲಿ ಮೊದಲ ಮೂರು ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅನ್ನು ವಿತರಿಸಲಾಯಿತು







