ಶಿಕ್ಷಣ ತಜ್ಞ ಡಾ.ಅಶೋಕ್ ಕಾಮತ್‌ಗೆ ‘ವಿಶ್ವಪ್ರಭಾ ಪುರಸ್ಕಾರ’

ಉಡುಪಿ, ಜ.5: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ-2026’ಕ್ಕೆ ಖ್ಯಾತ ಶಿಕ್ಷಣ ತಜ್ಞ ಡಾ.ಅಶೋಕ ಕಾಮತ್‌ರನ್ನು ಆಯ್ಕೆ ಮಾಡಲಾಗಿದೆ ಪ್ರತಿಷ್ಠಾನದ ಸಂಚಾಲಕ ಎಚ್.ಪಿ.ರವಿರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂ. ಗೌರವಧನ ವನ್ನು ಹೊಂದಿರುತ್ತದೆ. ಇದೇ ಜ.26ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ‘ಸಂಸ್ಕೃತಿ ಉತ್ಸವ’ದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ ಎಂದರು.
ಪರಿಚಯ: ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ನ ಪ್ರಾಂಶುಪಾಲ ಹಾಗೂ ಉಪನಿರ್ದೇಶಕ (ಅಭಿವೃದ್ಧಿ) ರಾಗಿರುವ ಅಶೋಕ್ ಕಾಮತ್ ಮೈಸೂರು ವಿವಿಯಿಂದ ಪದವಿ ಹಾಗೂ ಬಿ.ಇಡಿ ಪದವಿ ಪಡೆದ ಬಳಿಕ ಆಕಾಶವಾಣಿಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಬ್ರಹ್ಮಾವರದ ಸರಕಾರಿ ಸರ್ಕಾರಿ ಪ್ರೌಢಶಾಲೆ ಗೆ (1999-2003) ನೇಮಕಗೊಂಡರು. ಬಳಿಕ ವಳಕಾಡು (2003-2011) ಇಂದಿರಾನಗರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಪಡೆದರು.
ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ , ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ, ಡಯಟ್‌ನಲ್ಲಿ ಹಿರಿಯ ಉಪನ್ಯಾಸಕ, ಇದೀಗ ಪ್ರಾಂಶುಪಾಲರಾಗಿ ಭಡ್ತಿ ಪಡೆದಿದ್ದಾರೆ. ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿರುವ ಅಶೋಕ್ ಕಾಮತ್, ಶಿಕ್ಷಕರ ತರಬೇತಿ ಮಾಡೆಲ್‌ಗಳ ತಯಾರಿ ಹಾಗೂ ಸಂಪನ್ಮೂಲ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.
ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಗೆ 2007ರಲ್ಲಿ ಇಂಟೆಲ್ ಸಂಸ್ಥೆಯಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (2009), ರಾಜ್ಯ ಶಿಕ್ಷಕ ಪ್ರಶಸ್ತಿ (2010-ವಿಶೇಷ ಕೆಟಗರಿಯಲ್ಲಿ) ಪಡೆದಿದ್ದಾರೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಡಾ.ಕಾಮತ್ ಚುನಾವಣೆಯ ಮಾಸ್ಟರ್ ಟ್ರೈನರ್ ಆಗಿದ್ದಾರೆ.2024ರ ರಾಷ್ಟ್ರೀಯ ಮತದಾರ ದಿನದಂದು ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಇವರಿಂದ ಉತ್ತಮ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಹಾಗೂ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಸಂಸ್ಥೆಯ ಮಹಾಪೋಷಕರಾದ ಡಾ.ಹರೀಶ್ಚಂದ್ರ, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಗೌರವ ಸಲಹೆಗಾರರಾದ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.







