ಕರಾವಳಿಗೆ ಕಾಲಿಟ್ಟಿರುವ ನಿರ್ದಿಗಂತವನ್ನು ಪ್ರೋತ್ಸಾಹಿಸಿ: ಪ್ರಕಾಶ್ ರಾಜ್

ಉಡುಪಿ, ಜ.7: ಮೈಸೂರಿನಲ್ಲಿ ಆರಂಭಗೊಂಡ ನಮ್ಮ ನಿರ್ದಿಗಂತ ರಂಗಭೂಮಿ ತಂಡ ಇಂದು ಹೊಸದಾಗಿ ಕರಾವಳಿಗೆ ಕಾಲಿಟ್ಟಿದೆ. ಆ ಮೂಲಕ ಕರಾವಳಿಯ ನಿರ್ದಿಗಂತ ಆಗಿದೆ. ನಮ್ಮ ಮುಂದೆ ತುಂಬಾ ದೊಡ್ಡ ಪ್ರಯಾಣ ಇದೆ. ಈ ಸಂಸ್ಥೆಯು ನಿಮ್ಮೆಲ್ಲರ ಆಶ್ರಯದಲ್ಲಿಯೇ ಬೆಳೆಯಬೇಕು. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ಹೇಳಿದ್ದಾರೆ.
ತುಳುಕೂಟ ಉಡುಪಿ ವತಿಯಿಂದ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯ ಮೂರನೇ ದಿನವಾದ ಬುಧವಾರದ ನಾಟಕ ಪ್ರದರ್ಶನದಲ್ಲಿ ಅವರು ಭಾಗವಹಿಸಿ ಮಾತನಾಡುತಿದ್ದರು.
ನಿರ್ದಿಗಂತ ಎರಡನೇ ವರ್ಷ ಮಂಗಳೂರಿನಲ್ಲಿ ನಡೆಸಿದ ನಾಟಕೋತ್ಸವ ದಲ್ಲಿ ಈದಿ ಎಂಬ ತುಳು ನಾಟಕವನ್ನು ಪ್ರದರ್ಶಿಸಲಾಗಿತ್ತು. ಆ ಮೂಲಕ ತುಳು ನಾಟಕಕ್ಕೂ ಆದ್ಯತೆ ನೀಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೇರೆ ಬೇರೆ ರಂಗಭೂಮಿ ತಂಡಗಳು ಹಲವು ವರ್ಷಗಳಿಂದ ಸತತನವಾಗಿ ಕೆಲಸ ಮಾಡುತ್ತ ಬರುತ್ತಿದೆ. ಇದರಿಂದ ಕಲಿಯಲು ನಮಗೆ ತುಂಬಾ ಇದೆ. ತುಳು ನಾಟಕಗಳನ್ನು ಪ್ರೋತ್ಸಾಹಿಸುವ ತುಳುಕೂಟದಂತಹ ಸಂಸ್ಥೆಗಳಿಗೆ ನಾವು ಎಲ್ಲ ರೀತಿಯ ಸಹಾಕರ ನೀಡುತ್ತೇವೆ ಎಂದರು.
ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು. ಯಶೋಧಾ ಕೇಶವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀವಿಷ್ಣು ಕಲಾವಿದೆರ್ ಮದ್ದಡ್ಡ ಇವರಿಂದ ಕಾಶಿತೀರ್ಥ ನಾಟಕ ಪ್ರದರ್ಶನ ಗೊಂಡಿತು.
‘ನನಗೆ ಅಷ್ಟು ತುಳು ಮಾತನಾಡಲು ಬರುವುದಿಲ್ಲ. ಆದರೆ ಅರ್ಥ ಆಗುತ್ತದೆ. ಮುಂದೆ ನಾನು ತುಳು ಕಲಿಯುತ್ತೇನೆ. ಅದಂತೂ ಖಂಡಿತ. ನನಗೆ ತುಂಬಾ ಗೆಳೆಯರು ಇದ್ದಾರೆ. ಅವರ ಮೂಲಕ ಬೇಗ ಕಲಿಯುತ್ತೇನೆ’
-ಪ್ರಕಾಶ್ ರಾಜ್, ನಟ(ತುಳುವಿನಲ್ಲಿ ಮಾತನಾಡುತ್ತ..)







