ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಎಸ್‌ಐ ಚಿಕಿತ್ಸೆ ಪುನರಾರಂಭ: ನಗದು ರಹಿತ ದಾಖಲಾತಿ ಸೌಲಭ್ಯ ಲಭ್ಯ

ಉಡುಪಿ, ಫೆ.26: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ಇಎಸ್‌ಐಎಸ್) ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳನ್ನು ನೀಡುವ ಒಪ್ಪಂದವನ್ನು (ಎಂಒಯು) ನವೀಕರಿಸಲಾಗಿದೆ ಎಂದು ಕೆಎಂಸಿ ಪ್ರಕಟಿಸಿದೆ.
ಸೇವೆಯ ನವೀಕರಣದಿಂದ ಫೆ.25ರಿಂದಲೇ ಇಎಸ್‌ಐಎಸ್ ಫಲಾನುಭವಿ ಗಳು ನಗದು ರಹಿತವಾಗಿ ಚಿಕಿತ್ಸೆಗೆ ದಾಖಲಾಗುವ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಅದು ತಿಳಿಸಿದೆ. ಇಎಸ್‌ಐ ಅಡಿಯಲ್ಲಿ ಬರುವ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಒಪ್ಪಂದ ನವೀಕರಣಗೊಂಡಿದ್ದರೂ ಮಣಿಪಾಲ ಕೆಎಂಸಿ ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಮಾತ್ರ ಅದು ನವೀಕರಣಗೊಂಡಿರಲಿಲ್ಲ. ಈ ಬಗ್ಗೆ ಹಲವು ಸಂಘಟನೆಗಳು ಸಂಬಂಧಿತರ ಗಮನ ಸೆಳೆದು, ಅಲ್ಲೂ ಇಎಸ್‌ಐ ಸೇವೆ ಲಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.
ಕೆಲವು ಆಡಳಿತಾತ್ಮಕ ಕಾರಣಗಳಿಂದಾಗಿ ಒಪ್ಪಂದದ ನವೀಕರಣ ತಾತ್ಕಾಲಿಕವಾಗಿ ಬಾಕಿಯಾಗಿತ್ತು. ಇದೀಗ ಸಂಬಂಧಿತ ಪ್ರಾಧಿಕಾರಗಳಿಂದ ಅನುಮೋದನೆ ದೊರೆತಿರುವುದರಿಂದ ಸೇವೆಗಳು ಪುನರಾರಂಭಗೊಂಡಿವೆ ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ.
ಇಎಸ್‌ಐಎಸ್ ಫಲಾನುಭವಿಗಳು ತಮ್ಮ ಸಂಬಂಧಿತ ಇಎಸ್‌ಐ ಡಿಸ್ಪೆನ್ಸರಿಗಳಿಂದ ರೆಫರಲ್ ಪತ್ರವನ್ನು ಪಡೆದು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆ, ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೋಧನಾಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ ಕಂಟಿಪುಡಿ ಇಎಸ್‌ಐಎಸ್ ಫಲಾನುಭವಿ ಗಳಿಗೆ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ, ಎಂದು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ರೆಫರಲ್ ದಾಖಲೆಗಳನ್ನು ಪಡೆಯಲು ಫಲಾನುಭವಿಗಳು ತಮ್ಮ ಸಂಬಂಧಿತ ಇಎಸ್‌ಐ ಡಿಸ್ಪೆನ್ಸರಿಗಳನ್ನು ಸಂಪರ್ಕಿಸಬೇಕು. ದಾಖಲಾತಿ ಸಂಬಂಧಿತ ಹೆಚ್ಚಿನ ಸಹಾಯಕ್ಕಾಗಿ ಸಂಬಂಧಿತ ಆಸ್ಪತ್ರೆಗಳ ಸಹಾಯ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.






