ಉಪ್ಪೂರಿನ 101 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕಾ ವಸಾಹತು ಸ್ಥಾಪನೆ: ಉಡುಪಿ ಡಿಸಿ ಸ್ವರೂಪ ಟಿ.ಕೆ

ಉಡುಪಿ: ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ 101.1950 ಎಕರೆ ಖಾಸಗಿ ಜಮೀನನ್ನು ಸಣ್ಣ ಕೈಗಾರಿಕಾ ವಸಾಹತು ಸ್ಥಾಪನೆಗೆ ಗುರುತಿಸಲಾಗಿದ್ದು, ಈ ಕುರಿತ ಪ್ರಸ್ತಾವನೆಗೆ ಸಂಬಂಧಿಸಿದಂತೆ ಬೇಡಿಕೆಯ ವಿವರಗಳನ್ನು ಸಚಿವರಿಗೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಇದನ್ನು ಅನುಸರಿಸಿ, ಕೈಗಾರಿಕಾ ಪ್ರದೇಶಗಳ ಪ್ರಸ್ತಾವನೆಗೆ ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅದೇ ರೀತಿ ಉಡುಪಿ ತಾಲೂಕು ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಗ್ರಾಮದ ಸ.ನಂ.06 ರಲ್ಲಿರುವ 28 ಎಕರೆ ಸರಕಾರಿ ಜಮೀನಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಮಂಜೂರು ಮಾಡುವಂತೆ ಉಡುಪಿ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು.
ಮರು ಹಂಚಿಕೆಗೆ ಸೂಚನೆ: ಜಿಲ್ಲೆಯಲ್ಲಿ ಕೈಗಾರಿಕೋದ್ಯಮಿಗಳು ಕೈಗಾರಿಕಾ ಘಟಕ ಸ್ಥಾಪನೆಗೆ ಹಂಚಿಕೆಯಾದ ನಿವೇಶನಗಳಲ್ಲಿ ಉದ್ದಿಮೆ ಪ್ರಾರಂಭಿಸದೇ ಪ್ರತೀ ಸಭೆಯಲ್ಲಿಯೂ ವಿವಿಧ ನೆಪವೊಡ್ಡಿ ಹೆಚ್ಚುವರಿ ಕಾಲಾವಕಾಶ ಕೋರುತ್ತಿರುವ ಬಗ್ಗೆ ಅಸಮಧಾನ ಸೂಚಿಸಿದ ಜಿಲ್ಲಾಧಿಕಾರಿ, ಹೆಚ್ಚುವರಿ ಕಾಲಾವಕಾಶ ಪಡೆದು ಚಟುವಟಿಕೆ ಬದಲಾಯಿಸಿಕೊಂಡ ಘಟಕಗಳ ಸ್ಥಿತಿ- ಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ನೀಡುವಂತೆ ತಿಳಿಸಿದರು.
ಇದು ಪುನರಾವರ್ತನೆಯಾದಲ್ಲಿ ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಅರ್ಜಿ ಸಲ್ಲಿಸುವ ಆಸಕ್ತರಿಗೆ ನಿವೇಶನ ವನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದರು.
ಜಿಲ್ಲೆಯ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಗುತ್ತಿಗೆ ಕರಾರು ನಿರ್ವಹಿಸಿ ಕೊಂಡು ಯೋಜನೆ ಪ್ರಾರಂಭಿಸದೇ ಇರುವ ಘಟಕಗಳ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು, ನಂದಿಕೂರು, ಬೆಳಪು ಹಾಗೂ ಮಿಯ್ಯಾರು ಕೈಗಾರಿಕಾ ಪ್ರದೇಶದ 18.39 ಎಕ್ರೆಯಲ್ಲಿ ಒಟ್ಟು 26 ಘಟಕಗಳು ಗುತ್ತಿಗೆ ಕರಾರು ನಿರ್ವಹಿಸಿಕೊಂಡಿವೆ. 6 ಘಟಕಗಳು ಅನುಷ್ಠಾನದ ಹಂತದಲ್ಲಿದ್ದು, ಒಂದು ಘಟಕವು ನ್ಯಾಯಾಲಯದಲ್ಲಿದೆ. 19 ಘಟಕಗಳು ಯಾವುದೇ ಕೆಲಸ ಆರಂಭಿಸಿರುವುದಿಲ್ಲ. ಘಟಕ ಪ್ರಾರಂಭಿಸದೇ ಇರುವ ಉದ್ದಿಮೆದಾರರ ಕರಾರು ರದ್ದುಪಡಿಸಿ, ಕೈಗಾರಿಕಾ ಘಟಕ ಸ್ಥಾಪನೆಗೆ ಮುಂದೆ ಬರುವ ಆಸಕ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಕೈಗಾರಿಕಾ ಘಟಕಗಳ ಸ್ಥಾಪನೆಯೊಂದಿಗೆ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೈಗಾರಿಕಾ ಪ್ರದೇಶ ಗಳನ್ನು ಅಭಿವೃದ್ಧಿ ಪಡಿಸಿ, ಆಸಕ್ತ ಉದ್ಯಮಿಗಳಿಗೆ ಹಂಚಿಕೆ ಮಾಡಿದ್ದು, ಘಟಕಗಳನ್ನು ನಿಗದಿತ ಕಾಲಾವಧಿಯ ಒಳಗೆ ಅವುಗಳನ್ನು ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಮಂಜೂರಾತಿಯನ್ನು ರದ್ದುಪಡಿಸಿ, ನವ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಉಪಸ್ಥಿತರಿದ್ದ ಉದ್ಯಮಿಗಳಿಗೆ ಅವರು ಸ್ಪಷ್ಟ ಸೂಚನೆ ನೀಡಿದರು.
ಮೂಲಭೂತ ಸೌಕರ್ಯ ಕಲ್ಪಿಸಿ: ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸ ಬೇಕು. ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಕಾರ್ಯವನ್ನು ಶೀಘ್ರ ವಾಗಿ ಕೈಗೊಂಡು ಭೂಮಾಲಕರಿಗೆ ಪರಿಹಾರಧನ ಪಾವತಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಮಿಯ್ಯಾರು ಕೈಗಾರಿಕಾ ಪ್ರದೇಶದ ಕೈಗಾರಿಕಾ ಘಟಕಗಳಲ್ಲಿ ಹಾಲಿ ಇರುವ ಪರಿವರ್ತಕಗಳು ಓವರ್‌ಲೋಡ್ ಆಗುವುದರಿಂದ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಥವಾ ಹಾಲಿ ಇರುವ ಪರಿವರ್ತಕದ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯು ಕೈಗಾರಿಕೆಗಳಿಗೆ ಸಂಬಂಧಪಟ್ಟ ಕೌಶಲ್ಯಗಳ ಕೋರ್ಸುಗಳನ್ನು ಹೆಚ್ಚುವರಿಯಾಗಿ ತಮ್ಮ ಕೋರ್ಸುಗಳಲ್ಲಿ ಅಳವಡಿಸಿಕೊಂಡು ಐಟಿಐ, ಡಿಪ್ಲೋಮಾ ಪಡೆದ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವ ಕಾಶ ಕಲ್ಪಿಸಬೇಕು. ಉದ್ಯಮಿಗಳು ಬ್ಯಾಂಕುಗಳಲ್ಲಿ ಕೈಗಾರಿಕಾ ಘಟಕಕ್ಕೆ ಸಾಲ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಬ್ಯಾಂಕುಗಳ ಸಿಬಿಲ್ ರೇಟಿಂಗ್ಸ್ ಕ್ರಮದಿಂದ ತೊಂದರೆ ಅನುಭಸುತ್ತಿದ್ದು, ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿ ಗಳು ಆರ್‌ಬಿಐ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಹಾಂತೇಶ ಹಂಗರಗಿ, ಕಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸ ಕೈಗಾರಿಕಾ ಪ್ರದೇಶಕ್ಕೆ ಗಡಿ ಗುರುತು
ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಹೆಬ್ರಿ ತಾಲೂಕು ಶಿವಪುರದಲ್ಲಿ 74.84 ಎಕ್ರೆ ಹಾಗೂ ಕೆರೆಬೆಟ್ಟುನಲ್ಲಿ 38.75 ಎಕ್ರೆ ಖಾಸಗಿ ಹಾಗೂ ಸರಕಾರಿ ಜಮೀನು ಸೇರಿದಂತೆ ಒಟ್ಟು 113.59 ಎಕ್ರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ತಿಳಿಸಿದ್ದು, ಅದರಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಮೋಜಿಣಿ ಶಿವಮೊಗ್ಗ ಇವರು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಗಡಿಕಲ್ಲು ಅಳವಡಿಸುವ ಕಾರ್ಯವನ್ನು ಈಗಾಗಲೇ ಕೈಗೊಂಡಿದ್ದು, ವರದಿಯನ್ನು ಆದ್ಯತೆಯ ಮೇಲೆ ಶೀಘ್ರವೇ ನೀಡುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.ಸೂಚಿಸಿದರು.
337 ಘಟಕಗಳಿಗೆ 13.18 ಕೋಟಿ ಮಾರ್ಜಿನ್ ಹಣ ಬಾಕಿ
ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಫಲಾನುಭವಿಗಳ 570 ಘಟಕಗಳಿಗೆ 2190.10 ಲಕ್ಷ ರೂ. ಮಾರ್ಜಿನ್ ಹಣ ಬಿಡುಗಡೆ ಯಾಗಬೇಕಿದ್ದು, ಈವರೆಗೆ 233 ಘಟಕಗಳಿಗೆ 872.08 ಲಕ್ಷ ರೂ. ಮಾತ್ರ ಬಿಡುಗಡೆ ಯಾಗಿದೆ. ಬಾಕಿ ಉಳಿದ 337 ಘಟಕಗಳಿಗೆ 1318.02 ಲಕ್ಷ ರೂ. ಮಾರ್ಜಿನ್ ಹಣವನ್ನು ಶೀಘ್ರದಲ್ಲೇ ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ಪಡೆಯಲು 5875 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇವುಗಳಲ್ಲಿ 1383 ಅರ್ಜಿಗಳು ತಿರಸ್ಕೃತಗೊಂಡಿವೆ. 4064 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲಸೌಲಭ್ಯ ಮಂಜೂರಾಗಿದ್ದು, 3782 ಫಲಾನುಭವಿಗಳಿಗೆ 37.07 ಕೋಟಿ ಆರ್ಥಿಕ ಸಹಾಯಧನ ವಿತರಿಸಲಾ ಗಿದೆ ಎಂದ ಅವರು, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಆಸಕ್ತರಿಗೆ ಟೂಲ್ ಕಿಟ್ ವಿತರಿಸುವಂತೆ ತಿಳಿಸಿದರು.






