ಬುದ್ಧನಿಂದ ನೈತಿಕತೆ, ವಿಚಾರಶೀಲತೆಯ ಅರಿವು: ಸೋಸಲೆ ಗಂಗಾಧರ

ಉಡುಪಿ : ದಿ ಬುದಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನಾಗಪುರ ದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮಕ್ಕೆ ಮರಳಿದ ವಾರ್ಷಿಕ ದಿನದ ಪ್ರಯುಕ್ತ ಧಮ್ಮ ದೀಕ್ಷಾ ದಿನಾಚರಣೆ(ಧಮ್ಮ ಚಕ್ಕ ಪವತ್ತನ ದಿನ) ಕಾರ್ಯಕ್ರಮವನ್ನು ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಳ್ಳೆಗಾಲ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿ, ಧಮ್ಮ ಪ್ರವಚನ ನೀಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೌದ್ಧರು ಧಮ್ಮಾಚಾರಿ ಎಸ್.ಆರ್.ಲಕ್ಷ್ಮಣ್ ನೇತೃತ್ವದಲ್ಲಿ ಸಾಮೂಹಿಕ ಬುದ್ಧವಂದನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೌದ್ಧ ಸಾಹಿತಿ ಮತ್ತು ಚಿಂತಕ ಸೋಸಲೆ ಗಂಗಾಧರ ಮಾತನಾಡಿ, ಮೌಢ್ಯ ಹಾಗೂ ಅನೈತಿಕತೆಯೇ ಸಾಮಾಜಿಕ ವ್ಯವಸ್ಥೆಯ ಆಧಾರವಾಗಿದ್ದ ಕಾಲಘಟ್ಟದಲ್ಲಿ ಭಗವಾನ್ ಬುದ್ದ, ಜನರಿಗೆ ನೈತಿಕತೆ, ವಿಚಾರಶೀಲತೆಯ ಅರಿವನ್ನು ಮೂಡಿಸಿ ತನ್ನ ಜ್ಞಾನೋದಯದ ತಿರುಳಾದ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವನ್ನು ಬೋದಿಸಿ ದಮ್ಮದ ಚಕ್ರ ಚಲನ ಶೀಲಗೊಳಿಸಿದರು. ಬೌದ್ಧ ದಮ್ಮವು ಭಾರತದಲ್ಲಿ ನಶಿಸುತ್ತಿರುವ ಸಂದರ್ಭ ಅಂಬೇಡ್ಕರ್ ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ದಮ್ಮ ದೀಕ್ಷೆ ಪಡೆಯುವ ಮೂಲಕ ಮತ್ತೆ ಭಗವಾನ್ ಬುದ್ಧರ ದಮ್ಮ ಚಕ್ರಕ್ಕೆ ಚಾಲನೆ ನೀಡಿದರು ಎಂದು ಹೇಳಿದರು.
ಬಿಎಸ್‌ಐ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಟ್ಲ ಮಾತನಾಡಿದರು. ಈ ಸಂದರ್ಭದಲ್ಲಿ ಹಲವು ಮಂದಿ ಬಂತೇಜಿಯವರಿಂದ ಪಂಚಶೀಲಾ ಹಾಗೂ ಅಷ್ಟಾಂಗ ಮಾರ್ಗದ ಪ್ರತಿಜ್ಞೆ ಸ್ವೀಕರಿಸಿದರು. ಅಧ್ಯಕ್ಷತೆ ಯನ್ನು ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ರಾಘವೇಂದ್ರ ವಹಿಸಿದ್ದರು.
ವೇದಿಕೆಯಲ್ಲಿ ಧಮ್ಮಾಚಾರಿ ಎಸ್.ಆರ್.ಲಕ್ಮಣ, ಸಂಬುದ್ಧ ಟ್ರಸ್ಟ್‌ನ ಗೋಪಾಲಕೃಷ್ಣ, ಉಡುಪಿ ಉಪಾಧ್ಯಕ್ಷೆ ಕುಶಾಲ್ ಉಪಸ್ಥಿತರಿದ್ದರು. ತಿಮ್ಮಪ್ಪ ಸ್ವಾಗತಿಸಿದರು. ಅಜಯ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬಿಎಸ್‌ಐ ಉಡುಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.







