ದೇಶದ ಪ್ರತಿ ನಾಗರಿಕನೂ ಜಾಗೃತನಾಗಬೇಕು: ಪ್ರೊ.ಫಣಿರಾಜ್

ಉಡುಪಿ, ನ.26: ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಬೇಕಾದ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಚಿಂತಕ ಪ್ರೊ. ಫಣಿರಾಜ್ ಕರೆ ನೀಡಿದ್ದಾರೆ.
ನಗರದಲ್ಲಿ ಸಹಬಾಳ್ವೆ ಉಡುಪಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲೆ ಮತ್ತು ದಲಿತ ಸಂಘರ್ಷ ಸಮಿತಿ ಉಡುಪಿ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಸಂರಕ್ಷಣಾ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಕಾನೂನು ವ್ಯವಸ್ಥೆ ಮತ್ತು ರಾಜಕೀಯ ಪಕ್ಷಗಳನ್ನು ನಂಬಿ ಕುಳಿತುಕೊಂಡರೆ ಸಾಲದು. ಸಂವಿಧಾನವನ್ನು ರಕ್ಷಿಸಲು ಜನಸಾಮಾನ್ಯರು ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸಂಸತ್ತಿನಲ್ಲಿ ನಡೆಯುತ್ತಿರುವ ಕಾಯಿದೆಗಳ ಅಂಗೀಕಾರ ಪ್ರಕ್ರಿಯೆಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದ ಅವರು, 2004 ರಿಂದ 2014 ರವರೆಗಿನ ಯುಪಿಎ ಸರಕಾರದ ಅವಧಿಯಲ್ಲಿ ಶೇ. 74 ರಷ್ಟು ಕಾಯಿದೆಗಳನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಶಿಫಾರಸು ಮಾಡಿ, ಸುದೀರ್ಘ ಚರ್ಚೆಯ ನಂತರ ಅಂಗೀಕರಿಸಲಾಗುತ್ತಿತ್ತು. ಆದರೆ, 2014 ರಿಂದ 2019 ರವರೆಗಿನ ಬಿಜೆಪಿ ಆಡಳಿತದಲ್ಲಿ ಕೇವಲ ಶೇ.27ರಷ್ಟು ಕಾಯಿದೆಗಳನ್ನು ಮಾತ್ರ ಸಮಿತಿಗೆ ಕಳುಹಿಸಲಾಗಿದೆ.ಶೇ.73 ರಷ್ಟು ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ, ಏಕಮುಖವಾಗಿ ಸಂಖ್ಯಾಬಲದ ಆಧಾರದ ಮೇಲೆ ಅಂಗೀಕರಿಸಲಾಗಿದೆ. ಈ ಮೂಲಕ ಭಾರತದ ಸಂವಿಧಾನದ ರಕ್ತ-ಮಾಂಸವನ್ನು ಹೀರಿ ಕೇವಲ ಅಸ್ಥಿಪಂಜರವನ್ನಾಗಿ ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿಯ ನಿಹಾಲ್ ಕಿದಿಯೂರು, ಪ್ರೊ. ಮೋಹನ್ ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ ಅವರು ಕೂಡ ಸಂವಿಧಾನದ ಪ್ರಸ್ತುತ ಸ್ಥಿತಿಗತಿ ಹಾಗೂ ಪೌರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು.
ಈ ಪ್ರತಿಭಟನೆ ಸಂದರ್ಭದಲ್ಲಿ ನಾಗೇಶ್ ಉದ್ಯಾವರ, ನಿಸಾರ್ ಉಡುಪಿ, ಮುಹಮ್ಮದ್ ಮೌಲ, ಚಾರ್ಲ್ಸ್ ಅಂಬ್ಲೇರ್, ರಫೀಕ್ ಕುಂದಾಪುರ, ರಿಯಾಝ್ ಕೋಡಿ, ಶಾರದ, ಕುಲ್ಸುಮ್ ಅಬುಬಕ್ಕರ್, ಅಬ್ದುಲ್ ಅಝೀಜ್ ಉದ್ಯಾವರ, ಸಾಲಿಡಾರಿಟಿಯ ಅಫ್ವಾನ್ ಬಿ ಹೂಡೆ, ಜೌಹರ್ ಹೂಡೆ, ಮುಸ್ತಾಕ್ ಖತೀಬ್, ನಿಫಾಲ್ ಕಿದಿಯೂರು, ಇಕ್ಬಾಲ್ ಮನ್ನಾ, ಇಸ್ಮಾಯಿಲ್ ಕಟಪಾಡಿ ಸೇರಿದಂತೆ ಪ್ರಮುಖ ನಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.






