ಹೆಬ್ರಿ, ಬೈಂದೂರು ತಾಲೂಕುಗಳಲ್ಲಿ ಬ್ಯಾಂಕಿಂಗ್ ಸೇವೆ ವಿಸ್ತರಿಸಿ: ನಿಶಾ ಠಾಕೂರ್

ಉಡುಪಿ, ಮಾ.18: ಉಡುಪಿ ಜಿಲ್ಲೆ ಬ್ಯಾಂಕಿಂಗ್ ಸೇವೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದರೂ, ಹೆಬ್ರಿ ಹಾಗೂ ಬೈಂದೂರಿನಂಥ ಹಿಂದುಳಿದ ತಾಲೂಕುಗಳಲ್ಲಿ ಇಂದು ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ತಾಲೂಕುಗಳಲ್ಲಿ ಪ್ರಮುಖ ಬ್ಯಾಂಕುಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಯನ್ನು ಅಲ್ಲಿನ ಜನತೆಗೆ ನೀಡುವಂತಾಗಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ವಲಯದ ಎಜಿಎಂ ಹಾಗೂ ಅಗ್ರಣಿ ಜಿಲ್ಲಾ ಅಧಿಕಾರಿ ನಿಶಾ ಠಾಕೂರ್ ಜಿಲ್ಲೆಯ ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಬುಧವಾರ ಜಿಪಂ ಎನ್‌ಆರ್‌ಎಲ್‌ಎಂನ ಯೋಜನಾ ನಿರ್ದೇಶಕ ವಿಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಬ್ಯಾಂಕುಗಳ 2025-26ನೇ ಸಾಲಿನ ಮೂರನೇ ತ್ರೈಮಾಸಿಕದ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಕಾಪು, ಹೆಬ್ರಿಯಷ್ಟೇ ದೊಡ್ಡ ತಾಲೂಕಾದರೂ ಅಲ್ಲಿ 45 ಬ್ಯಾಂಕ್ ಶಾಖೆಗಳಿವೆ. ಆದರೆ ಹೆಬ್ರಿಯಲ್ಲಿರುವುದು ಕೇವಲ 17 ಹಾಗೂ ಬೈಂದೂರಿ ನಲ್ಲಿರುವುದು 28 ಶಾಖೆಗಳು ಮಾತ್ರ. ಕಾಪುವಿನಲ್ಲಿ 23 ಎಟಿಎಂಗಳಿದ್ದರೆ ಹೆಬ್ರಿ ಮತ್ತು ಬೈಂದೂರಿನಲ್ಲಿರುವುದು 9 ಮತ್ತು 12 ಮಾತ್ರ ಎಂಬುದನ್ನು ಅವರು ಲೀಡ್ ಬ್ಯಾಂಕ್‌ನ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ (ಕೆನರಾ ಬ್ಯಾಂಕ್) ಮ್ಯಾನೇಜರ್ ಹರೀಶ್ ಜಿ., ಕಾಪು, ಜಿಲ್ಲೆಯಲ್ಲಿ ಅತೀ ಹೆಚ್ಚು ಎನ್‌ಆರ್‌ಐಗಳಿರುವ ಪ್ರದೇಶ ವಾಗಿದೆ. ಹೀಗಾಗಿ ಇಲ್ಲಿ ಅತೀ ಹೆಚ್ಚಿನ ಬ್ಯಾಂಕ್ ಶಾಖೆಗಳಿದ್ದು, ಬ್ಯಾಂಕಿಂಗ್ ವ್ಯವಹಾರ, ಠೇವಣಿಯೂ ಇಲ್ಲಿ ಅಧಿಕವಾಗಿದೆ ಎಂದರು.
ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ಹಾಗೂ ಬ್ಯಾಂಕ್ ಶಾಖೆಗಳ ಸಂಖ್ಯೆಯೂ ಕಡಿಮೆ ಇದೆ. ಇಲ್ಲಿ ಪ್ರಮುಖ ಬ್ಯಾಂಕ್‌ಗಳು ಶಾಖೆ ತೆರೆದು ಜನರನ್ನು ತಲುಪಲು, ವ್ಯವಹಾರವನ್ನು ಹೆಚ್ಚಿಸಲು ಗಮನ ಹರಿಸಬೇಕು. ಬ್ಯಾಂಕಿನಿಂದ ದೊರೆಯುವ ಸಾಲ, ಸಹಾಯಧನ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಬ್ಯಾಂಕಿಂಗ್ ವ್ಯವಹಾರದತ್ತ ಆಕರ್ಷಿಸಬೇಕು ಎಂದರು.
ಜಿಲ್ಲೆಯ ಬ್ಯಾಂಕುಗಳು ಆರ್ಥಿಕ ವರ್ಷದಲ್ಲಿ ಆರ್‌ಬಿಐ ಮಾರ್ಗಸೂಚಿ ಯಂತೆ ನೀಡಿರುವ ಗುರಿಗಳನ್ನು ಸಾಧಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದೂ ಅವರು ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸಾಲ-ಠೇವಣಿ ಅನುಪಾತ ಏರಿಕೆ: ಜಿಲ್ಲೆಯ ಬ್ಯಾಂಕುಗಳ ಸಾಲ- ಠೇವಣಿ ಅನುಪಾತ (ಸಿಡಿ ರೆಷ್ಯೂ) ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.07ರಷ್ಟು ಹೆಚ್ಚಳ ಕಂಡಿದೆ. 2024ರ ಡಿಸೆಂಬರ್‌ನಲ್ಲಿ ಇಂದು ಶೇ.48.47 ಆಗಿದ್ದರೆ, 2025ರ ಡಿಸೆಂಬರ್‌ನಲ್ಲಿ ಶೇ.49.54ಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯ ಸೆಪ್ಟಂಬರ್ ಅವಧಿಗೆ ಹೋಲಿಸಿದರೂ ಶೇ.0.92 ರಷ್ಟು (ಶೇ.48.62) ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ಜಿಲ್ಲೆಯ ಬ್ಯಾಂಕ್‌ಗಳ ಕೊಡುಗೆ ಉತ್ತಮವಾಗಿದ್ದು, ಇದು ಇನ್ನಷ್ಟು ಪರಿಣಾಮಕಾರಿ ಯಾಗಿ ಮುಂದುವರಿಯಬೇಕು. ಜಿಲ್ಲೆಯ ಯುವ ಉದ್ಯೋಗಾಸಕ್ತರಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ನಿಗದಿತ ಗುರಿ ಮೀರಿ 165 ಫಲಾನುಭವಿಗಳಿಗೆ 6.59 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ ಎಂದು ಹರೀಶ್ ವಿವರಿಸಿದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ 5865 ಅರ್ಜಿಗಳು ಸ್ವೀಕೃತವಾಗಿದ್ದು, 1345 ಅರ್ಜಿಗಳು ತಿರಸ್ಕೃತಗೊಂಡು, 4028 ಫಲಾನುಭವಿಗಳಿಗೆ 36.65 ಕೋಟಿ ರೂ. ಸಾಲ ವಿತರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆ ಯಾಗಬೇಕು ಎಂದ ಅವರು, ಯೋಜನೆಯಡಿ ಸ್ವೀಕೃತವಾದ ಎಲ್ಲಾ ಅರ್ಜಿ ಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿಗಳಿಗೆ ಸಬ್ಸಿಡಿಯನ್ನು ಶೀಘ್ರ ವಿತರಿಸುವಂತೆ ಸೂಚನೆ ನೀಡಿದರು.
ಪ್ರಾರಂಭದಲ್ಲಿ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮ್ಯಾನೇಜರ್ ತದಿನಾಡ ಶ್ರೀನಾಗ ಪೂರ್ಣಾನಂದ್ 2025ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳಲ್ಲಿ ಜಿಲ್ಲೆಯ ಬ್ಯಾಂಕು ಗಳ ಸಾಧನಾ ವರದಿಯನ್ನು ಮಂಡಿಸಿ, ಜಿಲ್ಲೆಯ ಬ್ಯಾಂಕುಗಳ ಒಟ್ಟಾರೆ ವ್ಯವಹಾರ 61,697 ಕೋಟಿ ರೂ.ಗಳಿಂದ 67,840 ಕೋಟಿಗೆ ಏರಿದ್ದು, ಮೂರು ತಿಂಗಳಲ್ಲಿ 6143 ಕೋಟಿ ಏರಿಕೆ ಕಂಡಿದೆ. ಇದು ಒಟ್ಟಾರೆಯಾಗಿ ಶೇ.9.96ರಷ್ಟು ಪ್ರಗತಿಯನ್ನು ಕಂಡಿದೆ ಎಂದರು.
ಬ್ಯಾಂಕ್‌ಗಳು 22,475 ಕೋಟಿ ರೂ. ಸಾಲ ಸೌಲಭ್ಯ ನೀಡುವುದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 11.58 ರಷ್ಟು ಬೆಳವಣಿಗೆ ಹೊಂದಿದೆ. ಅದೇ ರೀತಿ ಬ್ಯಾಂಕ್ ಠೇವಣಿಯಲ್ಲೂ 3810 ಕೋಟಿ ರೂ. ಹೆಚ್ಚಳವಾಗಿದ್ದು, ಇದು ವಾರ್ಷಿಕ ಶೇ.9.17 ಹೆಚ್ಚಳ ತೋರಿಸಿದೆ ಎಂದರು.
ಸಭೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ರಾಜೇಶ್ ಶೆಟ್ಟಿ, ರುಡ್‌ಸೆಟ್ ನಿರ್ದೇಶಕ ಡಾ.ಬೊಮ್ಮಯ್ಯ ಹಾಗೂ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.







