13,500 ಶಿಕ್ಷಕರಿಗೆ ಶೀಘ್ರ ನೇಮಕಾತಿ ಪತ್ರ: ಸಚಿವ ಮಧು ಬಂಗಾರಪ್ಪ

ಉಡುಪಿ, ಆ.29: ರಾಜ್ಯದಲ್ಲಿ 40,000 ಶಿಕ್ಷಕರ ಕೊರತೆಯಿದ್ದು ವಾರದಲ್ಲಿ ಹೊರಬೀಳುವ ಹೈಕೋರ್ಟು ತೀರ್ಮಾನಕ್ಕನುಗುಣವಾಗಿ 13,500 ಶಿಕ್ಷಕರಿಗೆ ಶೀಘ್ರ ನೇಮಕಾತಿ ಪತ್ರ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮಂಗಳವಾರ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 32,000 ಶಿಕ್ಷಕರಿಗೆ ಕೋರಿಕೆ ವರ್ಗಾವಣೆ ನೀಡಿದ್ದು ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಲು 10,000 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅನ್ಯ ಪ್ರದೇಶದ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಲು ಅತಿಥಿ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಸಂವಿಧಾನದ ಓದು ಸೆ.5ರಿಂದ ಎಲ್ಲಾ ಶಾಲೆಗಳಲ್ಲೂ ನಡೆಯಲಿದ್ದು ಕೆಟ್ಟ ಬುದ್ಧಿಯ ಬಿಜೆಪಿಯವರನ್ನು ಭಾವನಾತ್ಮಕವಾಗಿ ಎದುರಿಸಬೇಕು. ಪಠ್ಯ ಪುಸ್ತಕ ಪರಿಷ್ಕರಿಸಲಾಗುತ್ತಿದ್ದು 60ಲಕ್ಷ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆಗಳನ್ನು ಎರಡು ವಾರದಿಂದ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿ ಮಕ್ಕಳಿಗೆ ಎರಡನೇ ಬಾರಿ ಸಪ್ಲಿಮೆಂಟರಿ ಪರೀಕ್ಷೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಪಕ್ಷದೊಳಗೆ ನಾಯಕರು ಬೆಳೆಯಬೇಕು. ಚುನಾವಣೆ ಸೋತ ತಕ್ಷಣ ಎಲ್ಲವನ್ನೂ ಕಳೆದುಕೊಂಡ ಭಾವ ಬೇಡ. ಶ್ರೀಮಂತರು ಸಿಕ್ಕ ಹಣವನ್ನು ಕೂಡಿಡುತ್ತಾರೆ, ಆದರೆ ಬಡವರ ಕೈಗೆ ಸಿಕ್ಕ ಹಣ ಸಿಕ್ಕಿದರೆ ಅವರು ಓಡಾಡುತ್ತದೆ. ಸರಕಾರಕ್ಕೂ ಶ್ರೇಯಸ್ಸು ಸಿಗುತ್ತದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರೇ ಗೃಹಜ್ಯೋತಿ, ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ, ಕೊಳ್ಕೆಬೈಲು ಕಿಶನ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ದಿನಕರ ಶೆಟ್ಟಿ ಹೇರೂರು, ಮುನಿಯಾಲು ಉದಯ ಕುಮಾರ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ವೆರೋನಿಕಾ ಕರ್ನೆಲಿಯೊ, ಹರೀಶ್ ಕಿಣಿ ಅಲೆವೂರು, ಪ್ರಸಾದರಾಜ್ ಕಾಂಚನ್, ಡಿ.ಆರ್.ರಾಜು, ಸದಾಶಿವ ದೇವಾಡಿಗ, ಪ್ರದೀಪ್ ಕುಮಾರ ಶೆಟ್ಟಿ, ಚಂದ್ರಶೇಖರ ಬಾಯರಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ ಕೊಡವೂರು ಸ್ವಾಗತಿಸಿ ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.







