ನಾಲ್ಕನೇ ಬಾರಿಗೆ ಉಡುಪಿ ಕೋರ್ಟ್ ಸಂಕೀರ್ಣಕ್ಕೆ ಹುಸಿ ಬಾಂಬ್ ಬೆದರಿಕೆ

ಉಡುಪಿ : ಉಡುಪಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ನಿರಂತರ ಬೆದರಿಕೆ ಇಮೇಲ್ ಸಂದೇಶ ಬರುತ್ತಿದ್ದು, ಇದೀಗ ಮಂಗಳವಾರ ನಾಲ್ಕನೇ ಬಾರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ತಾಂತ್ರಿಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇಂದು ಬೆಳಗ್ಗೆ ಅನಾಮೇಧ ಇಮೇಲ್ನಿಂದ ಕೋರ್ಟ್ ಇಮೇಲ್ ಗೆ ಸಂದೇಶ ಬಂದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಧ್ಯಾಹ್ನ ವೇಳೆ ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಎಲ್ಲ ಕಡೆ ತಪಾಸಣೆ ನಡೆಸಿತು. ಆದರೆ ಎಲ್ಲೂ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಕೂಡ ಹುಸಿ ಕರೆ ಎಂಬುದು ದೃಢಪಟ್ಟಿತು.
ಈ ಹಿಂದೆ ಜೂ.21, ಜೂ.26 ಮತ್ತು ನಿನ್ನೆಯಷ್ಟೇ ಕೋರ್ಟ್ ಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ಬಂದಿತ್ತು. ಈಗಾಗಲೇ ಮೊದಲ ಎರಡು ಬಾರಿಯ ಇಮೇಲ್ ಸಂದೇಶಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದೇ ಎಫ್ಐಆರ್ ನಲ್ಲಿ ಕಳೆದ ಎರಡು ದಿನಗಳ ಹುಸಿ ಬಾಂಬ್ ಸಂದೇಶ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಈ ಬಗ್ಗೆ ಈಗಾಗಲೇ ನಮ್ಮ ತಾಂತ್ರಿಕ ತಂಡ ತನಿಖೆ ನಡೆಸುತ್ತಿದೆ. ದೇಶದ ಹಲವು ಕೋರ್ಟ್ ಗಳಿಗೆ ಈ ರೀತಿಯ ಬೆದರಿಕೆ ಇಮೇಲ್ ಸಂದೇಶಗಳು ಬರುತ್ತಿವೆ. ಆದುದರಿಂದ ಈ ನಕಲಿ ಬೆದರಿಕೆ ಇ-ಮೇಲ್ ಗಳ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇತರ ಜಿಲ್ಲೆಗಳು, ರಾಜ್ಯಗಳು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತೀವ್ರ ಖಂಡನೆ :
ಉಡುಪಿ ಮಾನ್ಯ ನ್ಯಾಯಾಲಯಕ್ಕೆ ನಾಲ್ಕನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆಗೆ ಕರ್ನಾಟಕ ಪ್ರದೇಶ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯವಾದಿ ಹಬೀಬ್ ಅಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯಾಲಯಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕೋರ್ಟ್ ನಲ್ಲಿ ಪ್ರತಿದಿನ ತಪಾಸಣೆ, ಭದ್ರತೆ : ಎಸ್ಪಿ
ನ್ಯಾಯಾಲಯಗಳಿಗೆ ಬರುತ್ತಿರುವ ನಕಲಿ ಇ-ಮೇಲ್ ಬೆದರಿಕೆಗಳ ಹಿನ್ನೆಲೆಯಲ್ಲಿ ಪ್ರತಿದಿನ ನ್ಯಾಯಾಲಯ ಆರಂಭವಾಗುವ ಮೊದಲು ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸಾಮಗ್ರಿಗಳಿರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮುಂದೆ ಇಂತಹ ಇ-ಮೇಲ್ ಗಳು ಬಂದರೂ ನ್ಯಾಯಾಲಯದ ಕಾರ್ಯಚಟುವಟಿಕೆಗಳು ಹಾಗೂ ವಿಚಾರಣೆಗಳಿಗೆ ಅನಗತ್ಯ ಅಡಚಣೆ ಉಂಟಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೊಂದಿಗೆ ನಡೆದ ಚರ್ಚೆಯಂತೆ, ಲಭ್ಯವಿರುವ ಸಂಪನ್ಮೂಲಗಳು ಹಾಗೂ ಸಿಬ್ಬಂದಿ ಸಾಮರ್ಥ್ಯವನ್ನು ಪರಿಗಣಿಸಿ, ನ್ಯಾಯಾಲಯದ ಅಗತ್ಯವಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅದೇ ರೀತಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.






