ನಿರಂತರ ಜನಪರ ಚಳುವಳಿಗಳಿಂದ ಫ್ಯಾಸಿಸಂ ಸೋಲಿಸಲು ಸಾಧ್ಯ: ಚಿಂತಕ ಶಿವಸುಂದರ್

ಉಡುಪಿ, ಜು.29: ದೇಶದಲ್ಲಿ ನಿರಂತರ ಜನಪರ ಚಳವಳಿಗಳಿಂದ ಮಾತ್ರ ಫ್ಯಾಸಿಸಮ್ ಸೋಲಿಸಲು ಸಾಧ್ಯವಾಗುತ್ತದೆ. ಆದುದರಿಂದ ಅಂತಹ ಚಳುವಳಿಗಳು ಸಕ್ರಿಯವಾಗಬೇಕು ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ ಯುವ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಫ್ಯಾಸಿಸಮ್ ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಫ್ಯಾಸಿಸಮ್ ಮನಸ್ಥಿತಿ ಯನ್ನು ಹೋಗಲಾಡಿಸುವ ವ್ಯವಸ್ಥೆಯೇ ಈ ಸಮಸ್ಯೆಯ ಭಾಗವಾಗಿ ರುವುದು ವಾಸ್ತವಿಕತೆಯಾಗಿದ್ದು ಕಾಂಗ್ರೆಸ್ ಹೊರತಾದ ಚಳುವಳಿಯೊಂದನ್ನು ಸಕ್ರಿಯ ಗೊಳಿಸಬೇಕಾದ ಅಗತ್ಯವಿದೆ ಎಂದರು. ಈ ಚಳುವಳಿಗಳಿಂದ ತಕ್ಷಣ ಫಲಿತಾಂಶ ಹೊರ ಬಾರದಿದ್ದರೂ ದಶಕಗಳ ನಿರಂತರ ಪ್ರಯತ್ನದಿಂದ ಜನರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿರುವ ಕೋಮುವಾದವನ್ನು ದೂರೀಕರಿಸಲು ಖಂಡಿತ ಸಾಧ್ಯ ಎಂದರು.
ದಶಕಗಳ ಹಿಂದೆ ಕನಿಷ್ಠ ವೋಟ್ ಶೇರಿಂಗ್ ಪಡೆಯುತ್ತಿದ್ದ ಬಿಜೆಪಿ ಇಂದು ದೇಶದಲ್ಲಿ ಶೇ.36 ಮತ ಶೇರ್ ಪಡೆಯುತ್ತಿರುವುದರ ಹಿಂದೆ ನೂರು ವರ್ಷ ಗಳ ಪರಿಶ್ರಮ ಇದೆ. ಈ ಹಿಂದೆ ಜನರ ಬಳಿ ಚಳುವಳಿಗಳು ಸಕ್ರಿಯವಾಗಿದ್ದವು. ದಲಿತ ಚಳುವಳಿ, ಕಾರ್ಮಿಕ ಚಳುವಳಿ, ಮುಸ್ಲಿಮರ ವಿವಿಧ ಚಳುವಳಿ ಗಳು ಜನ ಫ್ಯಾಸಿಸಮ್ ಅಜೆಂಡಾಗಳಿಗೆ ಬಲಿಯಾಗುದಂತೆ ತಡೆಯುವಲ್ಲಿ ಸಫಲ ವಾಗುತ್ತಿದ್ದವು. ಇಂದು ಚಳುವಳಿಗಳ ವಿಭಜನೆ ಮತ್ತು ದುರ್ಬಲ ಗೊಂಡ ಕಾರಣ ಫ್ಯಾಸಿಸಮ್ ಬಲಿಷ್ಠವಾಗಿ ಬೆಳೆಯುತ್ತಿದೆ. ಈಗ ಫ್ಯಾಸಿಸಮ್’ನ ಹಿಂದೆ ಕಾರ್ಪೊರೇಟ್ ಶಕ್ತಿಗಳು ಕೂಡ ಇರುವುದರಿಂದ ಇದನ್ನು ಸೋಲಿಸಲು ನಿರಂತರ ಹೋರಾಟದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ನಾವುಗಳು ಇಂದು ಚಳುವಳಿಗಳನ್ನು ನಮ್ಮ ಜೀವನದ ಆದ್ಯತೆ ಮಾಡಿ ಕೊಂಡರೆ ಭವಿಷ್ಯದ ಜನರಿಗೆ ಉತ್ತಮ ಸಮಾಜ ನಿರ್ಮಿಸಿ, ಬಿಟ್ಟು ಹೋಗಲು ಸಾಧ್ಯವಾಗುತ್ತದೆ. ಈ ಫ್ಯಾಸಿಸಮ್‌ನ್ನು ಸಂವಿಧಾನದ ಪರಿಧಿಯಲ್ಲಿ ಅರ್ಥೈಸಿ ಕೊಂಡು ಜನರಿಗೆ ವಿವಿಧ ಕಾರ್ಯಕ್ರಮಗಳ ಮುಖಾಂತರ ತಲುಪ ಬೇಕಾಗಿದೆ. ನಿರಂತರ ಸುಳ್ಳಿನಿಂದ ಜನರಲ್ಲಿ ದ್ವೇಷ ಬಿತ್ತುವ ಫ್ಯಾಸಿಸಮ್ ಶಕ್ತಿಗಳ ಹಾಗೆ ನಾವು ನಿರಂತರ ಸತ್ಯ ತಲುಪಿಸುವ ಮೂಲಕ ಜನರ ಮನಸ್ಸು ತೆರೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್‌ಮೂಮೆಂಟ್‌ನ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರಬೆಟ್ಟು, ಶುಐಬ್ ಮಲ್ಪೆ, ಸರ್ಫರಾಝ್ ಮನ್ನಾ, ಎಸ್‌ಐಓನ ಆಯಾನ್ ಮಲ್ಪೆ, ಜಿಐಓನ ನೂಝ್ಲಾ ಉಪಸ್ಥಿತರಿದ್ದರು.







