ಭಾರತದಲ್ಲಿನ ಫ್ಯಾಸಿಸಂನ್ನು ಜನಸಂಘಟನೆಯಿಂದ ದುರ್ಬಲಗೊಳಿಸಲು ಸಾಧ್ಯ: ಕೆ.ಪಿ.ಸುರೇಶ್ ಕಂಜರ್ಪಣೆ

ಉಡುಪಿ, ಡಿ.23: ಭಾರತ ಇಂದು ಸಂಪೂರ್ಣ ಪ್ಯಾಸಿಸಂ ಪ್ರಭುತ್ವ, ರಾಷ್ಟ್ರವಾಗಿ ರೂಪಾಂತರಗೊಂಡಿದೆ. ಭಾರತದಲ್ಲಿರುವುದು ಪಾಶ್ಚಿಮಾತ್ಯ ಫ್ಯಾಸಿಸಂ ಅಲ್ಲ. ಆರ್‌ಎಸ್‌ಎಸ್ ಭಾರತದ ಗ್ರಾಮೀಣ ಪ್ರದೇಶದಲ್ಲಿದ್ದ ಉಳಿಗ ಮಾನ್ಯ ಪದ್ಧತಿಯನ್ನು ಅಖಂಡ ಭಾರತದಲ್ಲಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಈ ಫ್ಯಾಸಿಸಂನ್ನು ಜನರನ್ನು ಸಂಘಟಿಸುವ ಮೂಲಕ ಮಾತ್ರ ದುರ್ಬಲಗೊಳಿಸಲು ಸಾಧ್ಯ ಎಂದು ಹಿರಿಯ ಚಿಂತಕ ಕೆ.ಪಿ.ಸುರೇಶ್ ಕಂಜರ್ಪಣೆ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು, ಸಹಬಾಳ್ವೆ, ಸೌಹಾರ್ದ ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ, ಉಡುಪಿ ಸಾಲಿಡಾರಿಟಿ ಯೂತ್ ಮೂಮ್ಮೆಂಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ವಿಮಾ ನೌಕರರ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ವಿಚಾರಗೋಷ್ಠಿ ಮತ್ತು ಸಂವಾದದಲ್ಲಿ ಅವರು ‘ನಮ್ಮ ವರ್ತಮಾನ- ಭವಿಷ್ಯದ ಆತಂಕಗಳು’ ಕುರಿತು ವಿಚಾರ ಮಂಡಿಸಿದರು.
ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯ ಹಾಗೂ ಮುಖ್ಯವಾಹಿನಿಗಳ ರಾಜಕೀಯ ಪಕ್ಷಗಳ ಭ್ರಮೆಯಿಂದ ಹೊರಗಡೆ ಬಂದು, ದೇಶದಲ್ಲಿನ ಭಾವಾನಾತ್ಮಕ ಎಂಬ ವಿಭಜಕ ರಾಜಕಾರಣವನ್ನು ಹಸಿವು, ಶಿಕ್ಷಣ, ಉದ್ಯೋಗ ಎಂಬ ಭಾವನಾತ್ಮಕ ನೆಲೆಯಲ್ಲಿ ಸೋಲಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಭೂಸುಧಾರಣೆಯ ಭಾಗವಾಗಿ ಭೂಮಿ ಪಡೆದುಕೊಂಡವರ ಮಕ್ಕಳು ಮತ್ತು ಮೊಮ್ಮಕ್ಕಳೇ ಹಿಂದುತ್ವದ ಭಾಗ ವಾಗಿದ್ದಾರೆ. ಫ್ಯಾಸಿಸಂ ಆಡಳಿತವು ಮೊದಲು ಮಾನವ ಹಕ್ಕುಗಳನ್ನು ಧಮಿನಿ ಸುವ ಮೂಲಕ ಶುರುವಾಗುತ್ತದೆ. ದೇಶವನ್ನು ಮುಕ್ಕಿ ತಿನ್ನುವ ಭ್ರಷ್ಟಾಚಾರ, ಮತಗಳ್ಳತನ, ಬ್ಯಾಂಕ್ ಮುಳುಗಿಸು ವುದು ಇವರಿಗೆ ಮುಖ್ಯ ಆಗುವುದಿಲ್ಲ. ಈ ದೇಶದಲ್ಲಿ ಧರ್ಮ, ಜಾತಿ, ಜನಾಂಗದ ಹೆಸರಿನಲ್ಲಿ ಕಲ್ಪಿತ ಶತ್ರುವನ್ನು ಸೃಷ್ಠಿಸಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಧರ್ಮ ಮತ್ತು ಪ್ರಭುತ್ವ ಬಹುತೇಕವಾಗಿ ಪ್ರತ್ಯೇಕ ವಾಗಿರುತ್ತದೆ. ಆದರೆ ಫ್ಯಾಸಿಸಂ ಆಡಳಿತದಲ್ಲಿ ಅದು ಅವಿನಾಭವಾಗಿರುತ್ತದೆ. ಫ್ಯಾಸಿಸಂ ಆಡಳಿತವು ಕಾರ್ಮಿಕ ಶಕ್ತಿಯನ್ನು ಪಾರಂಪರಿಕ ಪೊಲೀಸ್, ಪ್ರಭುತ್ವ ಶಕ್ತಿ ಪ್ರದರ್ಶನದ ಬದಲು ಕಾನೂನು ಬದಲಾಯಿಸಿಕೊಂಡು ಧಮನ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಗೆ ಕಾಂಗ್ರೆಸ್ ಪರ್ಯಾಯ ಶಕ್ತಿಯೇ ಅಲ್ಲ. ಹಿಂದುತ್ವದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಆಕ್ಷೇಪ ಇಲ್ಲ. ಬಂಡವಾಳಶಾಹಿಗಳ ತುಷ್ಠಿಕರಣವನ್ನು ಮೋದಿ ಜೊತೆ ಕಾಂಗ್ರೆಸ್ ಕೂಡೆ ಪೈಪೋಟಿ ನಡೆಸುತ್ತಿದೆ. ಆದುದರಿಂದ ಫ್ಯಾಸಿಸಂನ್ನು ಎದುರಿಸಲು ಕಾಂಗ್ರೆಸ್ ಜೊತೆ ನಿಂತು ಕೊಂಡು ಹೋರಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಸಹ ಬಾಳ್ವೆ ಸಂಚಾಲಕ ಫಣಿರಾಜ್, ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಚಂದ್ರಶೇಖರ್ ವಿ., ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಫ್ವಾನ್ ಬಿ.ಹೂಡೆ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.







