ಉಡುಪಿ ಜಿಲ್ಲೆ, ಕುಂದಾಪುರದಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಉಡುಪಿ, ಡಿ.25: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನದ ಅಂಗವಾಗಿ ನಗರದೆಲ್ಲೆಡೆ ಗುರುವಾರ ಸಡಗರ, ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಬೆಳಗ್ಗೆ ಜಿಲ್ಲೆಯ ಬಹುತೇಕ ಎಲ್ಲ ಚರ್ಚ್‌ಗಳಲ್ಲಿ ಯೇಸುವಿನ ಸಾಮೂಹಿಕ ಆರಾಧನೆ ನಡೆಯಿತು.
ಹೆಚ್ಚಿನ ಚರ್ಚುಗಳಲ್ಲಿ ಬುಧವಾರ ರಾತ್ರಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಬಲಿಪೂಜೆಗಳು ಜರುಗಿದ್ದು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದರು.
ಗುರುವಾರ ಬೆಳಿಗ್ಗೆ ನಗರದ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ಅಲ್ಲದೆ ಬ್ರಹ್ಮಾವರ, ಮಲ್ಪೆ, ಬಾರ್ಕೂರು, ಬಸ್ರೂರು ಸೇರಿದಂತೆ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ರಿಶ್ಚಿಯನ್ನರು ಮನೆ-ಮನೆಗಳಲ್ಲಿ ತಯಾರಿಸಿದ್ದ ವಿಶೇಷ ಸಿಹಿ ತಿನಿಸಾದ ಕುರ್ಸ್ವಾ ವಿನಿಮಯ ಮಾಡಿಕೊಂಡರು. ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಮಧ್ಯಾಹ್ನ ಹಬ್ದದೂಟವನ್ನು ಕುಟುಂಬ ಸದಸ್ಯರು, ಆತ್ಮೀಯರೊಂದಿಗೆ ಸೇರಿ ಸವಿದರು.
ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಚರ್ಚ್ ಆವರಣದಲ್ಲಿ ಸಂಭ್ರಮಿಸಿದರು. ಪರಸ್ಪರ ಕೇಕ್ ಹಾಗೂ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿದರು. ಗುರುವಾರ ಸಂಜೆ ಕೆಲವು ಚರ್ಚ್‌ಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯಗಳು ಜರುಗಿದವು.
ಕುಂದಾಪುರದಲ್ಲಿ ಕ್ರಿಸ್ಮಸ್ ಆಚರಣೆ ಸಡಗರ
ಕುಂದಾಪುರ: 455 ವರ್ಷಗಳ ಇತಿಹಾಸವುಳ್ಳ ರಾಜ್ಯ ಕರಾವಳಿಯ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಇಲ್ಲಿನ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24ರ ಸಂಜೆ ಕ್ರಿಸ್ಮಸ್ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ. ಐವನ್ ಡಿಸೋಜಾ ದಿವ್ಯ ಬಲಿಪೂಜೆ ಯನ್ನು ಅರ್ಪಿಸಿ ದೇವಪುತ್ರನು ಈ ಜಗತ್ತಿನಲ್ಲಿ ಮನುಷ್ಯನೊಂದಿಗೆ ಜೀವಿಸಲು ಮನುಷ್ಯನಾಗಿ ಹುಟ್ಟಿದ. ಮನುಷ್ಯ ಹೇಗೆ ಜೀವಿಸಬೇಕೆಂದು ತಿಳಿಸಲು ದೇವರು ಮನುಷ್ಯನಾಗಿ ಹುಟ್ಟಿದ್ದು, ದೇವರು ನಮ್ಮೊಂದಿಗೆ ಜೀವಿಸಲು ಬಂದಿ ದ್ದಾರೆ. ಆದರೆ ಇಂದು ದೇವರು ನಮ್ಮೊಂದಿಗೆ ಭೇಟಿ ಮಾಡುವುದಿಲ್ಲ. ಇತರ ಮನುಷ್ಯರ ಮುಖಾಂತರ ನಮಗೆ ಸಹಾಯ ಮಾಡುತ್ತಾ ಮಮತೆ ತೋರಿಸುತ್ತಾರೆ. ಕಷ್ಟ ಕಾರ್ಪ್ಯಣಗಳನ್ನು ನೀಗಿಸುತ್ತಾರೆ ಎಂದರು.
ನಾವು ಪುಣ್ಯದ ಕೆಲಸಗಳನ್ನು ಮಾಡಬೇಕು. ಯೇಸು ಯಾವುದೇ ಆಡಂಬರ ಇಲ್ಲದೆ, ಹಟ್ಟಿಯಲ್ಲಿ ಜನಿಸಿದರು. ಹಟ್ಟಿಯಲ್ಲಿ ಅನ್ಯಾಯ ಇಲ್ಲ, ಗೌಜಿ ಗಲಾಟೆ ಇಲ್ಲ, ಅಹಂಕಾರ ಇಲ್ಲ, ದೊಡ್ಡಸ್ತಿಕೆ ಇಲ್ಲ, ಮೇಲು ಕೀಳು ಇಲ್ಲ, ಅಲ್ಲಿ ಶಾಂತಿಯ ವಾತವರಣವಿದೆ. ಇದರ ಸಂದೇಶ ನಾವು ಕೂಡ ಸಾಮಾನ್ಯ ರಂತೆ ಬಡವರಾಗಿ, ಜೀವಿಸಿ ಇತರರಿಗೆ ಸಹಾಯ ಮಾಡುವಂತರರಾಗಬೇಕು ಎಂದು ಸಂದೇಶ ನೀಡಿದರು.
ಚರ್ಚಿನ ಧರ್ಮಗುರು ವಂ.ಪೌಲ್ ರೇಗೊ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ, ಶುಭಾಶಯ ಕೋರಿ ವಂದಿಸಿದರು. ಐಸಿವೈಎಂ ಸಂಘಟನೆ ಯಿಂದ ವಾಳೆಯವರಿಗೆ ಕೇಕ್ ವಿತರಿಸಲಾಯಿತು.







