ರಶ್ಮಿ ಸಾವಂತ್ ವಿರುದ್ಧವೂ ಪ್ರಕರಣ ದಾಖಲಿಸಿ: ಅಮೃತ್ ಶೆಣೈ

ರಶ್ಮಿ ಸಾವಂತ್
ಉಡುಪಿ, ಜು.27: ಉಡುಪಿಯ ಕಾಲೇಜಿನ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ರಶ್ಮೀ ಸಾವಂತ್ ಎಂಬ ಮಹಿಳೆ ತನ್ನ ಟ್ವೀಟರ್ ಖಾತೆಯಲ್ಲಿ ಬರೆದ ಪ್ರಚೋದನಾಕಾರಿ ಸಂದೇಶಗಳನ್ನು ರಿಟ್ವೀಟ್ ಮಾಡಿ ದೂರನ್ನು ಬರೆದು ಪೋಲಿಸರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ಯಾಗ್ ಮಾಡಿದ್ದೆ. ಆದರೆ ಮರುದಿನವೇ ಆ ಟ್ವೀಟ್ ಡಿಲೀಟ್ ಆಗಿದೆ ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಆರೋಪಿಸಿದ್ದಾರೆ.
ರಶ್ಮೀ ತನ್ನ ಟ್ವೀಟ್ಗಳಲ್ಲಿ ಉಡುಪಿ ಕಾಲೇಜಿನ ಚಿತ್ರೀಕರಣದ ವೀಡಿಯೋ ನೋಡಿದ್ದೇನೆ ಎಂದು ಬರೆದಿದ್ದರು. ಎಸ್ಪಿಯವರು ಸಾಮಾಜಿಕ ಜಾಲತಾಣದಲ್ಲಿ ರುವ ವಿಡಿಯೋಗೂ ಉಡುಪಿ ಕಾಲೇಜಿನ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಪೊಲೀಸರು ಯೂ ಟ್ಯೂಬ್ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ಕೂಡ ದಾಖಲಿಸಿದ್ದರು.
ಅದರ ಬಳಿಕವೂ ರಶ್ಮೀ ಸಾವಂತ್ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ. ಅದಲ್ಲದೇ ಅವರು ಮಾಧ್ಯಮದವರಲ್ಲಿ ಹಾಗೂ ತನ್ನ ಟ್ವೀಟ್ಗಳಲ್ಲಿ ಪದೇ ಪದೇ ಉಡುಪಿ ಪೋಲಿಸರು ಅವರನ್ನು ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಿ ದ್ದಾರೆ. ಶೌಚಾಲಯದಲ್ಲಿ ಯಾರು ವಿಡಿಯೋ ಚಿತ್ರೀಕರಣ ಮಾಡಿದ್ದರೂ ನಾನು ವಿರೋಧಿಸುತ್ತೇನೆ. ಯಾವ ಧರ್ಮದವರೂ ಇರಲಿ ಅದು ತಪ್ಪೇ. ಆದರೆ ಪೋಲಿಸ್ ತನಿಖೆ ನಡೆಸುವ ಮೊದಲೇ ತೀರ್ಪು ನೀಡಿದ ರೀತಿಯಲ್ಲಿ ಟ್ವೀಟ್ ಮಾಡುವುದು ಕಾನೂನು ಬಾಹಿರ ಎಂದು ಅವರು ಟೀಕಿಸಿದ್ದಾರೆ.
ಆದುದರಿಂದ ಪೊಲೀಸರು ರಶ್ಮೀ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಬೇಕು. ಯಾಕೆಂದರೆ ಅವರಿಗೆ ಲಕ್ಷಾಂತರ ಮಂದಿ ಫಾಲೋ ವರ್ಸ್ಗಳಿದ್ದು, ಅವರು ಮಾಡಿದ ಟ್ವೀಟ್ಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ ಎಂದು ಹೇಳಿಕೆಯಲ್ಲಿ ಅಮೃತ್ ಶೆಣೈ ತಿಳಿಸಿದ್ದಾರೆ.







