ಕಾಪು ನಗರ ಯೋಜನಾ ಪ್ರಾಧಿಕಾರದಲ್ಲಿ ಕಡತಗಳು ಬಾಕಿ: ಲೋಕಾಯುಕ್ತರಿಂದ ಪರಿಶೀಲನೆ

ಕಾಪು, ಡಿ.18: ಕಂದಾಯಕ್ಕೆ ಸಂಬಂಧಿಸಿದ ಕಡತಗಳು ವಿಲೇವಾರಿ ಯಾಗದೆ ಬಾಕಿ ಉಳಿದಿರುವ ಬಗ್ಗೆ ಬಂದ ದೂರಿನಂತೆ ಉಡುಪಿ ಲೋಕಾಯುಕ್ತ ಪೊಲೀಸರು ಗುರುವಾರ ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕಾಪು ಪುರಸಭಾ ಕಟ್ಟಡದಲ್ಲಿರುವ ನಗರ ಯೋಜನಾ ಪ್ರಾಧಿಕಾರದಲ್ಲಿ ಕಡತಗಳು ವಿಲೇವಾರಿಯಾಗದೆ ಹಲವು ಸಮಯಗಳಿಂದ ಬಾಕಿ ಉಳಿದಿ ರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಈ ಕುರಿತು ಕಾಪು ಜನಸಂಪರ್ಕ ಸಭೆಯಲ್ಲೂ ಆರೋಪಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹಾಲ ಮೂರ್ತಿ ರಾವ್ ನೇತೃತ್ವದ ತಂಡ ರಾಜ್ಯ ಲೋಕಾಯುಕ್ತದಿಂದ ಸರ್ಚ್ ವಾರೆಂಟ್ ಪಡೆದು ಪ್ರಾಧಿಕಾರಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಕಡತಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ ಸಾಕಷ್ಟು ಸಮಯಗಳಿಂದ ವಿಲೇವಾರಿ ಆಗದೆ ಬಾಕಿ ಉಳಿದಿರುವ ಹಲವು ಕಡತಗಳು ಕಂಡುಬಂದಿವೆ.
ಇವುಗಳನ್ನು ಲೋಕಾಯುಕ್ತ ಪೊಲೀಸರು ದಾಖಲು ಮಾಡಿಕೊಂಡಿದ್ದು, ಈ ಕುರಿತ ವರದಿಯನ್ನು ರಾಜ್ಯ ಲೋಕಾ ಯುಕ್ತಕ್ಕೆ ಕಳುಹಿಸಿ ದೂರು ನೋಂದಾವಣಿ ಮಾಡಲಾಗುವುದು. ಮುಂದೆ ಈ ಬಗ್ಗೆ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದರೆ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡ ಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ನಿರೀಕ್ಷಕರುಗಳಾದ ಮಂಜುನಾಥ್, ರಾಜೇಂದ್ರ ನಾಯ್ಕ್ ಎಂ.ಎನ್. ಹಾಗೂ ಸಿಬ್ಬಂದಿಗಳು ಹಾಜರಿದ್ದರು.





