ಕಾರ್ಕಳ | ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಪ್ರಚೋದನಕಾರಿ ಪೋಸ್ಟ್: ನಿಟ್ಟೆಯ ಸುದೀಪ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಕಾರ್ಕಳ, ಜ.4: ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ನಿಟ್ಟೆಯ ಸುದೀಪ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಸುದೀಪ್ ಶೆಟ್ಟಿ ತನ್ನ ಫೇಸ್ಬುಕ್ ಪೇಜ್ ನಲ್ಲಿ ‘ಹಿಂದೂ ಮುಸ್ಲಿಂ ಸೌಹಾರ್ದದಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ ದಫ್ ನಂತಹ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಅಷ್ಟೊಂದು ಸೌಹಾರ್ದದ ಕಾಳಜಿ ಇದ್ದಲ್ಲಿ ಲವ್ ಜಿಹಾದ್, ಗೋ ಹತ್ಯೆ, ಭಯೋತ್ಪಾದನೆ, ಹಿಂದೂಗಳ ಮೆರವಣಿಗೆ ಮೆಲೆ ದಾಳಿ ಮಾಡುವುದು, ಆಹಾರಕ್ಕೆ ಉಗುಳುವುದು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದು, ಕಳ್ಳತನ ಮಾಡುವುದು, ಸಮಾಜದ ನೆಮ್ಮದಿ ಹಾಳು ಮಾಡುವುದನ್ನು ನಿರ್ಮೂಲನೆ ಮಾಡಿ ಸಾಮಾಜಿಕ ಸಾಮರಸ್ಯ ಕಾಪಾಡಲಿ. ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿದ ಕೂಡಲೆ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ’ ಎಂದು ಫೋಸ್ಟ್ ಹಾಕಿದ್ದನು.
ಈ ಮೂಲಕ ಸುದೀಪ್ ಶೆಟ್ಟಿ ಜಾತಿ, ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಪೋಸ್ಟ್ ಹಾಕಿರುವುದಾಗಿ ದೂರಲಾಗಿದೆ. ಜ.3ರಂದು ಸಂಜೆ ವೇಳೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ರುದ್ರೇಶ್ ಸಾಮಾಜಿಕ ಜಾಲತಾಣ ಪರಿಶೀಲನೆ ಮಾಡುವಾಗ ಈ ಪೋಸ್ಟ್ ಕಂಡು ಬಂದಿದ್ದು, ರುದ್ರೇಶ್ ನೀಡಿದಂತೆ ಸುದೀಪ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





