ಜಾನುವಾರು ಕಳವಿಗೆ ಯತ್ನ ಆರೋಪ: ಐದು ಮಂದಿ ಸೆರೆ

ಕೋಟ, ಜ.17: ಜಾನುವಾರು ಕಳವಿಗೆ ಸಂಚು ನಡೆಸುತ್ತಿದ್ದ ಆರೋಪದಡಿ ಐವರು ಆರೋಪಿಗಳನ್ನು ಕೋಟ ಪೊಲೀಸರು ಜ.17ರಂದು ನಸುಕಿನ ವೇಳೆ 2.30ರ ಸುಮಾರಿಗೆ ಚಿತ್ರಪಾಡಿ ಗ್ರಾಮದ ಪರಿವರ್ತನ ಬಿಲ್ಡಿಂಗ್ ಬಳಿ ಬಂಧಿಸಿದ್ದಾರೆ.
ಪಡುತೋನ್ಸೆ ಗ್ರಾಮದ ಹೂಡೆಯ ಮುಫೀದ್(22), ರಿಯಾನ್(21), ಆದೀಬ್ ಅಹಮ್ಮದ್(21), ಸೈಯದ್ ಜೈನ್ (16), ಮುಜಾಮಿಲ್ ಅಸಾದಿ(17) ಬಂಧಿತ ಆರೋಪಿಗಳು. ಇವರಿಂದ ಕಾರು, ಕಾರಿನಲ್ಲಿದ್ದ 2 ಚೂರಿ, ಹಾಗೂ ಐದು ಮೊಬೈಲ್‌ಗಳು, 3230ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದ ಕಾರು ಮತ್ತು ಆರೋಪಿಗಳನ್ನು ಪೊಲೀಸರು ವಿಚಾರಿಸಿದ್ದು, ಅವರು ಪೊಲೀಸರಿಗೆ ಸರಿಯಾದ ಉತ್ತರ ನೀಡದೇ ಇರುವಾಗ ಕಾರಿನೊಳಗೆ ಪರಿಶೀಲನೆ ನಡೆಸಲಾಯಿತು. ಆಗ ಕಾರಿನಲ್ಲಿ ಚೂರಿ, ಪ್ರಾಣಿಯ ರಕ್ತ ಕಲೆ ಕಂಡುಬಂದಿದೆ. ಆರೋಪಿಗಳು ಸಂಘಟಿತರಾಗಿ ದನವನ್ನು ಕಳ್ಳತನ ಮಾಡಿ ವಧೆ ಮಾಡಿ ಈ ಹಿಂದೆ ಮಾರಾಟ ಮಾಡಿದ್ದು ಮತ್ತೆ ದನ ಕಳ್ಳತನ ಮಾಡಿ ವಧೆ ಮಾಡಲು ಬಂದಿರುವುದಾಗಿ ಪೊಲೀಸರು ದೂರಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





