ಹೂಡೆಯಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರ
ಉಡುಪಿ, ಸೆ.17: ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಹೂಡೆ, ಎಚ್.ಆರ್.ಎಸ್ ಹೂಡೆ ಮತ್ತು ಶ್ರೀಹರಿ ನೇತ್ರಾಲಯ ವತಿಯಿಂದ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ರವಿವಾರ ಸಾಲಿಹಾತ್ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಶ್ರೀಹರಿ ನೇತ್ರಾಲಯದ ನಿರ್ದೇಶಕ ಸುಬ್ರಹ್ಮಣ್ಯ ಒಕ್ಕೂಡ ಮಾತನಾಡಿ, ಕಣ್ಣು ದೇವನ ಅತೀ ದೊಡ್ಡ ಕೊಡುಗೆಯಾಗಿದೆ. ಅದರ ಸುರಕ್ಷತೆ ಅತೀ ಅಗತ್ಯ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಹೂಡೆ ಜಮಾಅತೆ ಇಸ್ಲಾಮಿ ಹಿಂದ್‌ನ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು. ಈ ಸಂದರ್ಭದಲ್ಲಿ ನೇತ್ರತಜ್ಞರಾದ ಡಾ.ಹರಿಪ್ರಸಾದ್ ಒಕ್ಕೂಡ, ಡಾ.ರೂಪಶ್ರೀ ರಾವ್, ಸಾಲಿಡಾರಿಟಿ ಯೂತ್‌ಮೂವ್ಮೆಂಟ್ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್‌ಬೆಟ್ಟು, ಸಾಲಿಡಾರಿಟಿ ಹೂಡೆ ಅಧ್ಯಕ್ಷ ಜಾಬೀರ್ ಖತೀಬ್ ಉಪಸ್ಥಿತರಿದ್ದರು. ಸಾಲಿಡಾರಿಟಿ ಹೂಡೆಯ ಕಾರ್ಯದರ್ಶಿ ಜೌಹರ್ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ನೂರಾರು ಫಲನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.