ಸಮಾಜ ಸುಧಾರಕರ ಹೋರಾಟದಿಂದ ಒಟ್ಟಾಗಿ ಓಣಂ ಆಚರಿಸುವ ಸ್ವಾತಂತ್ರ್ಯ: ನಟ ಮುಕೇಶ್

ಉಡುಪಿ, ಆ.31: ಶತಮಾನಗಳ ಹಿಂದೆ ಕೇರಳದಲ್ಲಿ ಎಲ್ಲರೂ ಒಂದಾಗಿ ಓಣಂ ಆಚರಿಸುವ ಸ್ವಾತಂತ್ರ್ಯ ಇರಲಿಲ್ಲ. ಆದರೆ ಸಮಾಜ ಸುಧಾರಕರಾದ ನಾರಾಯಣ ಗುರು, ಅಯ್ಯಂಕಾಳಿ ಮೊದಲಾದವರ ಹೋರಾಟದ ಫಲವಾಗಿ ಇಂದು ನಾವೆಲ್ಲ ಜೊತೆಯಾಗಿ ಓಣಂ ಆಚರಿಸುವ ಸ್ವಾತಂತ್ರ್ಯ ದೊರೆತಿದೆ ಎಂದು ಕೇರಳದ ಕೊಲ್ಲಂನ ಶಾಸಕ ಹಾಗೂ ಚಿತ್ರನಟ ಮುಕೇಶ್ ಹೇಳಿದ್ದಾರೆ.
ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಉಡುಪಿ ವತಿಯಿಂದ ಅಂಬಲಪಾಡಿಯ ಶಾಮಿಲಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಓಣಂ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬ. ನಾವೆಲ್ಲರೂ ಜಾತಿ ಬೇರೆ ಬೇರೆಯಾದರೂ ಶಿಕ್ಷಣ ಪಡೆದ ಪರಿಣಾಮ ಒಂದೇ ಎಂಬ ಚಿಂತನೆಯನ್ನು ಬೆಳೆಸಿಕೊಂಡಿದ್ದೇವೆ. ಅಂದಿನಿಂದ ನಮಗೆ ಒಟ್ಟಾಗಿ ಹಬ್ಬ ಆಚರಿಸುವ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅವರು ತಿಳಿಸಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಚೆರಿಯನ್ ವರ್ಗೀಸ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಪಿ.ವಿ., ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್‌ನ ನಿರ್ದೇಶಕ ಡಾ.ಶ್ರೀಕುಮಾರ್, ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ.ರಾಜನ್, ಉದ್ಯಮಿ ರಂಜನ್ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಅಧ್ಯಕ್ಷ ಸುಗುಣ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯೆ ಡಾ.ಎ.ಗಿರಿಜಾ, ಮುಳುಗು ತಜ್ಞ ಈಶ್ವರ ಮಲ್ಪೆ, ಉದ್ಯಮಿ ಹಾಜಿ ಕೆ. ಅಬ್ದುಲ್ಲಾ ಪರ್ಕಳ, ಕೃಷಿಕರಾದ ವಲ್ಸ ಜಾರ್ಜ್, ನಿವೃತ್ತ ಯೋಧ ಕ್ಯಾ.ವೇಣುಗೋಪಾಲನ್ ನಾಯರ್ ಅವರನ್ನು ಪಂಚರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಓಣಂ ಸಂಭ್ರಮ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್., ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್‌ನ ಕಾರ್ಯದರ್ಶಿ ಬಿನೀಶ್ ವಿ.ಸಿ., ಸೆಂಟರ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಶೈನಿ ಸತ್ಯಭಾಮ, ರಾಜನ್ ಜಿ. ಪಿಲಿಪ್ಸ್ ಉಪಸ್ಥಿತರಿದ್ದರು.
ತ್ರಿಶೂನರ್ ಜನ ನಯನ ತಂಡದಿಂದ ಕೇರಳೀಯ ವೈಭವಂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬಳಿಕ ಎಲ್ಲರಿಗೂ ಓಣಂ ಸದ್ಯ(ಓಣಂ ಊಟ) ಏರ್ಪಡಿಸಲಾಗಿತ್ತು. ಹೂವಿನ ರಂಗೋಲಿ(ಪೂಕ್ಕಳಂ) ಸ್ಪರ್ಧೆ ನಡೆಯಿತು.







