ಗಣೇಶೋತ್ಸವ | ರಾತ್ರಿ 10 ರಿಂದ ಮುಂಜಾನೆ 6ರವರೆಗೆ ಧ್ವನಿವರ್ಧಕ ಬಳಕೆ ನಿಷೇಧ: ಉಡುಪಿ ಡಿಸಿ ಸ್ವರೂಪ ಟಿ.ಕೆ.
"ಡಿಜೆ ಬಳಕೆ ಇಲ್ಲ, ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಿ"

ಉಡುಪಿ, ಸೆ.11: ಮಣ್ಣಿನಿಂದ ನಿರ್ಮಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ಸ್ನೇಹಿ ಗೌರಿ - ಗಣೇಶ ಹಬ್ಬವನ್ನು ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.
ಶುಕ್ರವಾರ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚೌತಿ ಹಬ್ಬ ಆಚರಣೆಯ ಸಲುವಾಗಿ ಕಾನೂನು ಸುವಸ್ಯವಸ್ಥೆಗೆ ಸಂಬಂಧಿಸಿ ದಂತೆ ಚರ್ಚಿಸಲು ಕರೆಯಲಾದ ವಿವಿಧ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ಇದೇ ಸೆ.13 ಮತ್ತು 14ರಂದು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸುವ ಮೂಲಕ ನೈಸರ್ಗಿಕ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸ ಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳು ನೈಸರ್ಗಿಕವಾಗಿ ನೀರಿನಲ್ಲಿ ಕರಗುವುದಿಲ್ಲ. ಇವು ಮಾಲಿನ್ಯ ಉಂಟುಮಾಡುವುದರೊಂದಿಗೆ ಜಲಚರಗಳಿಗೆ ಹಾನಿ ಉಂಟು ಮಾಡುತ್ತದೆ. ಇದಕ್ಕೆ ಯಾರೂ ಆಸ್ಪದ ನೀಡಬಾರದು ಎಂದವರು ಹೇಳಿದರು.
ನೈಸರ್ಗಿಕ ಜಲ ಮೂಲಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ತಾತ್ಕಾಲಿಕ/ ಕೃತಕ ವಿಸರ್ಜನಾ ತೊಟ್ಟಿಗಳಲ್ಲಿ ವಿಗ್ರಹಗಳನ್ನು ವಿಸರ್ಜನೆ ಮಾಡಬೇಕು. ವಿಸರ್ಜನೆ ಸಂದರ್ಭದಲ್ಲಿ ಹಸಿಕಸ ಹಾಗೂ ಒಣಕಸವನ್ನು ನೀರಿಗೆ ಎಸೆಯದೆ ಪ್ರತ್ಯೇಕವಾಗಿ ವಿಂಗಡಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ನದಿ, ಕೆರೆ, ಕೊಳ ಅಥವಾ ಇತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಅನಿ ವಾರ್ಯ ವಾದರೆ ನಿಗದಿತ ಸ್ಥಳದಲ್ಲಿ ಗರಿಷ್ಠ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಮೌಲಭೂತ ಸೌಕರ್ಯಗಳನ್ನು ನಿಗದಿಪಡಿಸಿ, ರಕ್ಷಣಾ ತಂಡ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.
ಪಿಒಪಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ತಡೆಗಟ್ಟಲು ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳ ಮೇಲೆ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಒಂದೊಮ್ಮೆ ಪಿಒಪಿ ಬಳಸಿ ತಯಾರಿಸಿದ ಮೂರ್ತಿಗಳ ಸಂಗ್ರಹಣೆ, ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದರು.
ಧ್ವನಿವರ್ಧಕ ಬಳಕೆಗೆ ಅನುಮತಿ: ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವಾಗ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಮತ್ತು ಧ್ವನಿವರ್ಧಕ ಬಳಸಲು ಪೋಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿಗಳನ್ನು ಪಡೆಯಬೇಕು. ಗಣೇಶೋತ್ಸವ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ, ರಾತ್ರಿ 10ರಿಂದ ಬೆಳಗ್ಗೆ 6:00 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಗಣೇಶ ವಿಗ್ರಹಗಳ ವಿಸರ್ಜನೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಇತರೆ ಯಾವುದೇ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಶಾಲಾ-ಕಾಲೇಜು, ಸಾಮಾಜಿಕ ಜಾಲತಾಣ ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂರ್ತಿ ಗಳಿಂದ ಆಗುವ ಅಪಾಯಗಳ ಕುರಿತು ಮತ್ತು ಪರಿಸರ ಸ್ನೇಹಿ ಮೂರ್ತಿಗಳ ಬಳಕೆಯ ಕುರಿತು ನಿರಂತರ ಜಾಗೃತಿ ಮೂಡಿಸಬೇಕು ಎಂದ ಜಿಲ್ಲಾಧಿಕಾರಿ ಗಳು, ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಂದ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್‌ಪಿ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಶೆಟ್ಟಿ, ಜಿಲ್ಲಾ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್, ಜಿಲ್ಲಾ ಮಟ್ಟದ ವಿವಿ ಅಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳು, ಇಓಗಳು ಉಪಸ್ಥಿತರಿದ್ದರು.






