ಗಂಗೊಳ್ಳಿ| ಜಾತ್ರೆಯಲ್ಲಿ ದಲಿತ ಸಹೋದರರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಗಂಗೊಳ್ಳಿ, ಎ.19: ದಲಿತ ಸಹೋದರರಿಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಹಕ್ಲಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ಮುಖಮಂಟಪದ ಬಳಿ ಎ.19ರಂದು ನಸುಕಿನ ವೇಳೆ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಕುಂದಬಾರಂದಾಡಿ ಗ್ರಾಮದ ಕೋಳೂರು ಕ್ರಾಸ್ ನಿವಾಸಿ ಬಾನುಪ್ರಕಾಶ ಎಂಬವರು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಯಕ್ಷಗಾನ ಕಾರ್ಯಕ್ರಮ ನೋಡಿಕೊಂಡು ಮನೆಗೆ ಬೈಕಿನಲ್ಲಿ ತನ್ನ ತಮ್ಮನೊಂದಿಗೆ ಹೊರಟಿದ್ದರು. ಈ ವೇಳೆ ಎರಡು ಬೈಕಿನಲ್ಲಿ ಬಂದ ದೀಪಕ್ ಪೂಜಾರಿ, ರಾಮ ಪೂಜಾರಿ ಮತ್ತು ಇಬ್ಬರು ಬಾನುಪ್ರಕಾಶ್ ಅವರ ಬೈಕ್‌ನ್ನು ತಡೆದು ನಿಲ್ಲಿಸಿ, ಜಾತಿನಿಂದನೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಇದನ್ನು ತಡೆಯಲು ಬಂದ ಬಾನುಪ್ರಕಾಶ್ ಅವರ ತಮ್ಮ ಸುದರ್ಶನ್ ಅವರಿಗೂ ಆರೋಪಿಗಳು ಹಲ್ಲೆ ಮಾಡಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




