ಗ್ಯಾರೇಜ್ ಉದ್ಯಮ ಸುಧಾರಿತ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಅಗತ್ಯ: ಪಾಬ್ಲಾ

ಮಣಿಪಾಲ, ಜ.4: ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಖಾಸಗಿ ಗ್ಯಾರೇಜು ಉದ್ಯಮಿಗಳು ಸುಧಾರಿತ ತಂತ್ರಜ್ಞಾನಕ್ಕೆ ತಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಇದರ ಅಂಗ ಸಂಸ್ಥೆ ಎಂಎಸ್‌ಡಿಸಿಯ ಸಹಭಾಗಿತ್ವದಲ್ಲಿ ಮಣಿಪಾಲದಲ್ಲಿ ರವಿವಾರ ಆಯೋಜಿಸಲಾದ ಸುಧಾರಿತ ತಂತ್ರಜ್ಞಾನದ (ಬಿಎಸ್-6) ದ್ವಿಚಕ್ರ ವಾಹನಗಳ ದುರಸ್ತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಎಚ್.ವಿ. ಪೈ ಮಾತನಾಡಿ, ಕಾಲೇಜು ಸಾಮಾಜಿಕ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರೋತ್ಸಾಹ ನೀಡಿ ಉದಯೋನ್ಮುಖ ತಂತ್ರಜ್ಞರಿಗೆ ಬದುಕು ರೂಪಿಸಿಕೊಳ್ಳುವ ಅವಕಾಶಗಳನ್ನು ನಿರಂತರವಾಗಿ ಕಲ್ಪಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ವಹಿಸಿದ್ದರು. ಎಂಎಸ್‌ಡಿಸಿ ರಿಜಿಸ್ಟ್ರಾರ್ ಡಾ.ಆಂಜಯ್ಯ ದೇವಿನೇನಿ, ಆಟೋಮೊಬೈಲ್ ವಿಭಾಗದ ಉಸ್ತುವಾರಿ ಹಿತೇಂದರ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ., ಹಿರಿಯ ಸಲಹೆಗಾರ ಯಾದವ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಎಸ್.ಜಿ.ಕೃಷ್ಣ, ವಿನಯ್ ಕುಮಾರ್ ಕಲ್ಮಾಡಿ, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿ ಹಿರಿಯಡ್ಕ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಶಿಬಿರ ಸಂಯೋಜಿಸಿ ನಿರೂಪಿಸಿದರು.







