ಬಡವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯ: ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ

ಉಡುಪಿ/ಮಂಗಳೂರು, ಜ.25: ಬಡವರಿಗಾಗಿ ಮಾಡುವ ಸಹಾಯಕ್ಕೆ ದೇವರ ಕೃಪಾವರಗಳು ಸದಾ ಇದೆ. ಅವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ.
ಮಂಗಳೂರು ಫಾದರ್ ಮುಲ್ಲರ್ಸ್ ಕನ್ವೆಶ್ನನ್ ಸೆಂಟರ್‌ನಲ್ಲಿ ರವಿವಾರ ಜರಗಿದ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಇದರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಮೂತ್ರಪಿಂಡ ವೈಫಲ್ಯ ದಿಂದ ನರಳುತ್ತಿರುವ, ದಕ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಜೋಸೆಫ್ ಮಿನೇಜಸ್ ಸಾಸ್ತಾನ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಜಾನೆಟ್ ಫೆರ್ನಾಂಡಿಸ್ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಎರಡನೇ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಬಡವರಿಗಾಗಿ ಮರುಗುವವರು ಧನ್ಯವಂತರು ಎಂದು ಯೇಸುಸ್ವಾಮಿ ಹೇಳಿದ ಮಾತಿನಂತೆ ಇಂದು ಕ್ರೈಸ್ತ ಸಮುದಾಯ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿಯ ಮೂಲಕ ಬಡವರ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಕೊಂಡು ಬಂದಿದೆ. ಇದರಿಂದ ಬಡತನದಲ್ಲಿ ಇರುವ ಕುಟುಂಬಗಳಿಗೆ ಆಶ್ರಯದಾತರಾಗಿ ನಿಲ್ಲುವ ಪುಣ್ಯದ ಕೆಲಸ ವಿಶ್ವದಾದ್ಯಂತ ನಡೆಯುತ್ತಿದೆ. ಇಂತಹ ಮಾನವೀಯ ಕೆಲಸಕ್ಕೆ ದೇವರ ಆಶೀರ್ವಾದ ಕೂಡ ಇರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕ್ರೈಸ್ತ ಸಮು ದಾಯ ತನ್ನ ಸೇವೆಯ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಕೇವಲ ಶೇ.2.5 ಜನಸಂಖ್ಯೆಯನ್ನು ಹೊಂದಿರುವ ಸಮುದಾಯದ ಕಾರ್ಯ ಜಾತಿ ಮತ ಭೇಧವಿಲ್ಲದೆ ದೇಶದ ಉಳಿದ ಶೇ.97.5 ಜನರಿಗೆ ತನ್ನ ಸೇವೆಯನ್ನು ನೀಡು ತ್ತಿದೆ. ಇಂತಹ ಸೇವೆಯಲ್ಲಿ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಸಂಘಟನೆ ಮುಂಚೂಣಿಯಲ್ಲಿರುವುದು ಶ್ಲಾಘನಾರ್ಹ ಸಂಗತಿ ಎಂದರು.
ಟ್ರಿನಿಟಿ ಮೆಡಿಕೇರ್ ಸರ್ವಿಸ್‌ನ ರೂವಾರಿ ಜೊಸೇಫ್ ಮಿನೇಜಸ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಹುಟ್ಟುವಾಗ ತನಗೆ ಸಾವಿದೆ ಎಂಬುದನ್ನು ಅರಿತುಕೊಂಡೇ ಈ ಭೂಮಿಗೆ ಬರುತ್ತಾನೆ. ಹುಟ್ಟು ಮತ್ತು ಸಾವಿನ ಮಧ್ಯೆ ಆತನ ಬದು ಕಿನ ಶೈಲಿ ದೇವರಿಗೆ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ನಮ್ಮ ಬದುಕು ದೇವರಿಗೆ ಮೆಚ್ಚುವಂತೆ ಬದುಕಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ಅಂತರರಾಷ್ಟ್ರೀಯ ಅಧ್ಯಕ್ಷ ಜುವಾನ್ ಮಾನ್ವೆಲ್ ಬ್ಯೂರೆಗೋ ಗೋಮ್ಸ್, ಗೌರವ ಅತಿಥಿಗಳಾಗಿ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಜೂಡ್ ಮಂಗಳ್ ರಾಜ್, ಅಂತಾ ರಾಷ್ಟ್ರೀಯ ಜನರಲ್ ಕೌನ್ಸಿಸ್ ವಿಶೇಷ ಒಂಬುಡ್ಸ್ ಮನ್ ಜೋಸೆಫ್ ಪಾಂಡ್ಯನ್, ಫಾದರ್ ಮುಲ್ಲರ್ಸ್ ಸಂಸ್ಥೆಗಳ ನಿರ್ದೇಶಕ ವಂ.ಫಾವುಸ್ತಿನ್ ಲೂಕಾಸ್ ಲೋಬೊ, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಗೂ ಮಾನಿಕ್ಯಮ್, ಸಂಯೋಜಕ ಆಶಾ ವಾಜ್, ಯುವ ಪ್ರತಿನಿಧಿ ಆಲಿಸ್ಟರ್ ನಜರೆತ್, ಸೈಂಟ್ ವಿನ್ಸೆಂಟ್ ದಿ ಪಾವ್ಲ್ ಕೇಂದ್ರ ಸಮಿತಿಯ ಅಧ್ಯಕ್ಷ ಗ್ಯಾಬ್ರಿಯಲ್ ಜೋ ಕುವೆಲ್ಲೊ, ಆಧ್ಯಾತ್ಮಿಕ ನಿರ್ದೇಶಕ ವಂ.ಫ್ಲೇವಿಯಾನ್ ಲೋಬೊ, ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲಾರೆನ್ಸ್ ಮಚಾದೊ, ಸಂಚಾಲಕ ಫಿಲೋಮಿನಾ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.







