ಗೋಪಾಡಿ: ಉಪಯೋಗಕ್ಕಿಲ್ಲದೆ ಪಾಳುಬಿದ್ದಿದೆ ಅಂಬೇಡ್ಕರ್ ಭವನ
► 2016-17ರಲ್ಲಿ ನಿರ್ಮಾಣದ ಬಳಿಕ ಬಾಗಿಲು ತೆರೆಯದ ಆರೋಪ ► ಎಸ್ಸಿ-ಎಸ್ಟಿ ಮನೆಯೇ ಇಲ್ಲದ ಕಡೆ ಭವನ ಯಾಕೆ? ► ಸೂಕ್ತ ತನಿಖೆಗೆ ದಸಂಸ ಆಗ್ರಹ

ವರದಿ: ಯೋಗೀಶ್ ಕುಂಭಾಸಿ
ಕುಂದಾಪುರ, ಸೆ.13: ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಗೋಪಾಡಿಯ ಅಂಬೇಡ್ಕರ್ ಭವನದ ಬಾಗಿಲು ಇಂದಿನವರೆಗೆ ತೆರೆದಿಲ್ಲ. ಕಟ್ಟಡದೊಳಕ್ಕೆ ಜೇಡರ ಬಲೆ ಕಟ್ಟಿದ್ದು, ಹೊರಭಾಗ ಗಿಡಗಂಟಿ, ಪೊದೆಗಳಿಂದ ಆವೃತವಾಗಿದೆ. ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡುಚಾವಡಿಬೆಟ್ಟು ಎಂಬಲ್ಲಿ ನಿರ್ಮಿಸಿದ ಅಂಬೇಡ್ಕರ್ ಭವನದ ಇಂದಿನ ಚಿತ್ರಣ ಇದು.
ಅಂಬೇಡ್ಕರ್ ಭವನವನ್ನು ಇಲ್ಲಿ ನಿರ್ಮಿಸಿರುವುದರ ನೈಜ್ಯ ಉದ್ದೇಶವೇನು ಎಂಬುದು ಈಗ ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿ-ಪಂಗಡಗಳ ಮನೆಯೇ ಇಲ್ಲದ ಪಡುಚಾವಡಿಬೆಟ್ಟು ಪ್ರದೇಶಲ್ಲಿ 2016-17ರಲ್ಲಿ ಕೆಆರ್‌ಐಎಲ್ ನಿಂದ 12 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡಿತ್ತು.
ಈ ಭವನದಿಂದ ಪರಿಶಿಷ್ಟ ಜಾತಿ-ಪಂಗಡಗಳಿಗೆ ಇದುವರೆಗೆ ಯಾವುದೇ ಉಪಯೋಗವಾಗಿಲ್ಲ. ಈ ಭವನ ನಿರ್ಮಾಣ ಮಾಡಲು ಕನಿಷ್ಟ 20 ಸೆಂಟ್ಸ್ ಜಾಗವಿರಬೇಕಿದ್ದು,ಇಲ್ಲಿ ಕೇವಲ 8-9ಸೆಂಟ್ಸ್ ಸ್ಥಳದಲ್ಲಿ ನಿರ್ಮಾಣಗೊಂಡಿದೆ. ಸುತ್ತಮುತ್ತ ದಲಿತೇತರ ಸಮುದಾಯದ ಮನೆಗಳಿದ್ದು, ಸಂಪರ್ಕ ರಸ್ತೆ ಕೂಡಾ ಖಾಸಗಿಯವರದ್ದಾಗಿದೆ.
ದಲಿತ ಸಮುದಾಯದವರೇ ಹೆಚ್ಚಾಗಿ ಇರುವ ಕಡೆಯಲ್ಲಿ ಅವರ ವಿವಿಧ ಚಟುವಟಿಕೆ ನಡೆಸಲು ಅನುಕೂಲ ಕಲ್ಪಿಸುವುದು ಅಂಬೇಡ್ಕರ್ ಭವನ ನಿರ್ಮಾಣದ ಉದ್ದೇಶವಾಗಿದೆ. ಆದರೆ ಈ ಪ್ರದೇಶದಲ್ಲಿ ಸಮುದಾಯದ ಒಂದು ಮನೆಯೂ ಇಲ್ಲದೆ ಭವನ ನಿರ್ಮಿಸಿದ್ದು ಉಪಯೋಗಕ್ಕಿಲ್ಲದಂತಾಗಿದೆ.
ಸೂಕ್ತ ತನಿಖೆಗೆ ಒತ್ತಾಯ
ಪಡುಚಾವಡಿಬೆಟ್ಟು ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ವೇಳೆ ದಲಿತ ಮುಖಂಡರ ಅಭಿಪ್ರಾಯ ಪಡೆಯದೇ ಭವನವನ್ನು ನಿರ್ಮಿಸಲಾಗಿದೆ. ದಲಿತ ಸಮುದಾಯದ ಯಾವುದೇ ಸಭೆ ಸಮಾರಂಭ ಮಾಡಲು ಪ್ರಸ್ತುತ ಇರುವ ಸ್ಥಳ ಯೋಗ್ಯವಿಲ್ಲ ಎಂಬುದು ಸಂಘಟನೆಯವರ ಆರೋಪ.
ಪರಿಶಿಷ್ಟ ಜಾತಿ ಪಂಗಡಗಳ ಶೇಕಡಾವಾರು ನಿಧಿಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿದ್ದರ ಬಗ್ಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ, ತಾಲೂಕು ಸಂಘಟನಾ ಸಂಚಾಲಕರಾದ ಸುರೇಶ್ ಹಕ್ಲಾಡಿ, ನಾಗರಾಜ್ ಸಟ್ವಾಡಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
"2018-19ರ ಉಡುಪಿ ಜಿಲ್ಲಾ ದಲಿತ ಕುಂದು ಕೊರತೆಗಳ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸಂಘಟನೆಯಿಂದ ಲಿಖಿತ ದೂರು ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಇಷ್ಟು ದೊಡ್ಡ ಪ್ರಮಾಣದ ಪರಿಶಿಷ್ಟ ಜಾತಿ ಪಂಗಡಗಳ ಶೇಕಡಾವಾರು ನಿಧಿಯನ್ನು ದುರ್ಬಳಕೆ ಮಾಡಿಕೊಂಡ ಸಂಬಂಧಿತ ಇಲಾಖೆ, ಇಂಜಿನಿಯರ್, ಗುತ್ತಿಗೆದಾರರು ಮತ್ತು ಅಂದಿನ ಕುಂದಾಪುರ ತಾಲೂಕು ಸಮಾಜ ಕಲ್ಯಾಣಾ ಧಿಕಾರಿಗಳ ವಿರುದ್ಧ ಉಡುಪಿ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣಾಧಿಕಾರಿಗಳು ಕ್ರಮವಹಿಸಬೇಕಿದೆ. ಸೂಕ್ತ ಕ್ರಮಕೈಗೊಳ್ಳಲು ಮೂರು ತಿಂಗಳು ಗಡುವು ನೀಡಲಾಗುತ್ತದೆ. ಇಲ್ಲವಾದಲ್ಲಿ ದಲಿತರ ಸರ್ವಾಂಗೀಣ ಏಳಿಗೆಗಾಗಿ ಮೀಸಲಿಟ್ಟ ಹಣವನ್ನು ಬೇಕಾಬಿಟ್ಟಿ ವಿನಿಯೋಗಿಸಿ ದಲಿತರ ಹಕ್ಕನ್ನು ಕಸಿದುಕೊಂಡವರ ವಿರುದ್ಧ ದಲಿತ ದೌರ್ಜನ್ಯ ದೂರು ದಾಖಲಿಸಿ ಕಾನೂನು ಹೋರಾಟ ನಡೆಸಲಾಗುತ್ತದೆ".
- ರಾಜು ಬೆಟ್ಟಿನಮನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಂಚಾಲಕ
"ಈ ಹಿಂದೆ ಗೋಪಾಡಿ ಗ್ರಾಪಂ ವ್ಯಾಪ್ತಿ ಪಡುಚಾವಡಿಬೆಟ್ಟು ಅಂಬೇಡ್ಕರ್ ಭವನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮುದಾಯದವರಿಗೆ ಉಪಯೋಗವಾಗದಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಮಿತಿ ಕಾರ್ಯ ಚಟುವಟಿಕೆಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೇ ಅಧ್ಯಕ್ಷರಾಗಿದ್ದು ಪ.ಜಾತಿ-ಪ.ಪಂಗಡದ ಹೆಚ್ಚಿನ ಜನರು ಈ ಭವನ ಸದುಪಯೋಗ ಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪಿಡಿಒ ಅವರಿಗೆ ಸೂಚಿಸಲಾಗಿದೆ".
-ರಾಘವೇಂದ್ರ ವರ್ಣೇಕರ್, ಸಹಾಯಕ ನಿರ್ದೆಶಕರು ಕುಂದಾಪುರ ಸಮಾಜ ಕಲ್ಯಾಣ ಇಲಾಖೆ.







