ಬೈಂದೂರು ತಾಲೂಕು ಯಳಜಿತ್ ಹೊಸೆರಿಯಲ್ಲಿ ಕದಿಕೆ ಟ್ರಸ್ಟ್‌ನಿಂದ ಕೈ ಮಗ್ಗ ನೇಕಾರಿಕೆ ತರಬೇತಿ ಪ್ರಾರಂಭ

ಉಡುಪಿ, ಅ.3: ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಯ್ಗೆಯನ್ನು ಪುನಶ್ಚೇತನಗೊಳಿಸಿದ ಕಾರ್ಕಳದ ಕದಿಕೆ ಟ್ರಸ್ಟ್, ಬೈಂದೂರು ತಾಲೂಕಿನ ಯಳಜಿತ್ ಹೊಸರಿಯ ಸರೋಜ ಅಣ್ಣಪ್ಪ ಅವರ ಮಗ್ಗದ ಮನೆಯಲ್ಲಿ ಗಾಂಧಿ ಜಯಂತಿಯ ದಿನ ವಾದ ಮಂಗಳವಾರ ಹೊಸದಾಗಿ ಕೈಮಗ್ಗ ನೇಕಾರಿಕೆ ತರಬೇತಿಯನ್ನು ಪ್ರಾರಂಭಿಸಿದೆ.
ಸರಿಯಾದ ಸಂಪರ್ಕ ವ್ಯವಸ್ಥೆಯೂ ಇಲ್ಲದ, ಬೇರೆ ಉದ್ಯೋಗಗಳಿಗೆ ಅವಕಾಶವೂ ಇಲ್ಲದ ತೀರಾ ಗ್ರಾಮೀಣ ಒಳ ಪ್ರದೇಶ ವಾದ ಹೊಸೆರಿಯ ಏಳು ಮಂದಿ ಯುವಜನರು ಈ ಯೋಜನೆಯಲ್ಲಿ ತರಬೇತಿ ಪಡೆಯಲಿದ್ದಾರೆ.
ಆರು ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕದಿಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ಜೊತೆಗೆ ತಿರುವನಂತಪುರದ ಪ್ರಖ್ಯಾತ ತರಬೇತಿದಾರ ಚಂದ್ರನ್ ಅವರಿಂದ ತರಬೇತಿ ಕೊಡಿಸಲಾಗುವುದು. ಶಿಬಿರಾರ್ಥಿಗಳು ಅಡಿಕೆ ಚೊಗರು ಮತ್ತು ಇತರ ಸಹಜ ಬಣ್ಣಗಳ ಉಡುಪಿ ಸೀರೆ ಸೇರಿದಂತೆ ವಿವಿಧ ಕೈಮಗ್ಗ ಉತ್ಪನ್ನಗಳನ್ನು ತಯಾರಿಸಲಿದ್ದಾರೆ.
ಕಾರ್ಯಕ್ರಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಎಲ್ಲರೂ ಸೇರಿ ‘ರಘುಪತಿ ರಾಘವ’ ಪ್ರಾರ್ಥನಾ ಗೀತೆ ಹಾಡುವುದ ರೊಂದಿಗೆ ಆರಂಭ ವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಗಾನ್ ಸೊಸೈಟಿ ಸಂಸ್ಥಾಪಕ ಶಂಕರನಾರಾಯಣ ಅವರು ಗಾಂಧೀಜಿಯವರು ಪ್ರತಿಪಾದಿಸಿದ ಸುಸ್ಥಿರ ಗ್ರಾಮೋದ್ಯೋಗದ ಅವಕಾಶವೊಂದನ್ನು ಈ ಪ್ರದೇಶದಲ್ಲಿ ಆರಂಭಿಸಿ ದ್ದಕ್ಕೆ ಕದಿಕೆ ಟ್ರಸ್ಟ್‌ನ್ನು ಅಭಿನಂದಿಸಿದರು.
ಕದಿಕೆ ಟ್ರಸ್ಟ್‌ನ ಟ್ರಸ್ಟೀ ಶ್ರೀಕುಮಾರ್ ನಕ್ರೆ ಹವಾಮಾನ ಬದಲಾವಣೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧಿ ಚಿಂತನೆಯ ಮಹತ್ವ ತಿಳಿಸಿದರು. ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಕದಿಕೆ ಟ್ರಸ್ಟ್‌ನ ಕಾರ್ಯವೈಖರಿ ಮತ್ತು ತರಬೇತಿಯ ಉದ್ದೇಶದ ಕುರಿತು ಮಾಹಿತಿ ನೀಡಿದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಸಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಿವಳ್ಳಿ ನೇಕಾರರ ಸಂಘದ ಎಂಡಿ ಶಶಿಕಾಂತ ಕೋಟ್ಯಾನ್, ಉಡುಪಿ ನೇಕಾರರ ಸಂಘದ ಎಂಡಿ ದಿನೇಶ್ ಕುಮಾರ್, ಹಿರಿಯ ಕೃಷಿಕ ರಾದ ಲಿಂಗಯ್ಯ ಮರಾಟಿ, ನಾರಾಯಣ ಗಾಣಿಗ, ಸುಶೀಲ ನಾಯ್ಕ್, ಮಹಾಬಲ ಮರಾಟಿ, ಕದಿಕೆ ಟ್ರಸ್ಟ್‌ನ ಟ್ರಸ್ಟಿಗಳಾದ ಪುರುಷೋತ್ತಮ ಅಡ್ವೆ, ಸಚಿನ್‌ಕುಮಾರ್, ಊರಿನ ಹಿರಿಯರು, ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಯಳಜಿತ್ ಪರಿಸರದ ಸರೋಜ, ಭಾರತಿ, ಅಂಬಿಕಾ, ಕಾವ್ಯ, ವಸಂತಿ, ಮೋಹಿನಿ, ಸುಶೀಲ ಅವರು ಚಂದ್ರನ್ ಅವರಿಂದ ಆರು ತಿಂಗಳ ಕಾಲ ಕೈಮಗ್ಗ ತರಬೇತಿಯನ್ನು ಪಡೆಯಲಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಉಡುಪಿ ಸೀರೆ ಪುನಶ್ಚೇತನ ಯೋಜನೆಯನ್ನು ಕದಿಕೆ ಟ್ರಸ್ಟ್ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ. ಕದಿಕೆ ಟ್ರಸ್ಟ್‌ನ ಪ್ರಯತ್ನಗಳಿಂದ ಉಡುಪಿ ಸೀರೆಗೆ ‘ಭೌಗೋಳಿಕ ಮಾನ್ಯತೆ’ ದೊರಕಿದೆ.







