ರಾಜ್ಯ ಕರಾವಳಿಯಲ್ಲಿ ಭಾರೀ ಮಳೆಯ ಸೂಚನೆ; ರೆಡ್ ಅಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ
ಉಡುಪಿ : ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ರಾಜ್ಯದ ವಿಕೋಪ ನಿಯಂತ್ರಣ ವಿಭಾಗ ನೀಡಿದ್ದು, 'ರೆಡ್ ಅಲರ್ಟ್' ಘೋಷಿಸಿದೆ.
ಮಂಗಳವಾರ ಹಾಗೂ ಬುಧವಾರ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆಯನ್ನು ನೀಡಿರುವ ಇಲಾಖೆ, ಗುರುವಾರವೂ ಇದು ಮುಂದುವರಿಯುವ ಸೂಚನೆಯನ್ನು ನೀಡಿದೆ. ಇದೇ ವೇಳೆ ಮಲೆನಾಡು ಜಿಲ್ಲೆಗಳಲ್ಲೂ ಮುಂದಿನ ಎರಡು ದಿನ ಬಿರುಸಿನ ಮಳೆ ಬೀಳುವ ಸಾಧ್ಯತೆ ಇರುವುದಾಗಿ ಅದು ತಿಳಿಸಿದೆ.
ಗಾಳಿಯೊಂದಿಗೆ ಬಿರುಮಳೆಯಿಂದ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬೆಂಗಳೂರಿನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಸಾರ್ವಜನಿಕರೂ ಸಮುದ್ರ, ನದಿ ತೀರಗಳಿಗೆ ತೆರಳದಂತೆ ಅದು ತಿಳಿಸಿದೆ.
ವಿದ್ಯುತ್ ಆಘಾತಕ್ಕೆ ಯುವಕ ಬಲಿ :
ರವಿವಾರ ಸಂಜೆ ಹಿಲಿಯಾಣ ಗ್ರಾಮದ ಚೋರಾಡಿ ಕಲ್ಲುಗದ್ದೆ ಎಂಬಲ್ಲಿ ಗಾಳಿ-ಮಳೆಗೆ ಕೊಟ್ಟಿಗೆಯ ವಿದ್ಯುತ್ ವಯರ್ ಜೋತಾಡುತಿದ್ದ ಕಾರಣ ಅದನ್ನು ಮೇಲಕ್ಕೆ ಕಟ್ಟಲು ಹೋದ ನಾರಾಯಣ ಪೂಜಾರಿ ಎಂಬವರ ಪುತ್ರ ಗಣೇಶ, ಹಳೆಯದಾಗಿದ್ದ ವಯರ್ ತುಂಡಾಗಿ ಎದೆಯ ಭಾಗಕ್ಕೆ ತಾಗಿ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ರವಿವಾರ ಸಂಜೆ ವಿಪರೀತ ಗಾಳಿಯೊಂದಿಗೆ ಮಳೆ ಸುರಿಯುತಿದ್ದಾಗ ಮನೆಯ ಕೊಟ್ಟಿಗೆಯ ವಿದ್ಯುತ್ ವಯರ್ ಜೋತುಬಿದ್ದಿದ್ದು, ಅದನ್ನು ಮೇಲಕ್ಕೆ ಎತ್ತಿ ಕಟ್ಟಲು ಗಣೇಶ್ 7ಗಂಟೆ ಸುಮಾರಿಗೆ ಕೊಟ್ಟಿಗೆಗೆ ಹೋಗಿದ್ದರು. ಆದರೆ ಹಳೆಯದಾಗಿದ್ದ ವಯರ್ ತುಂಡಾಗಿ ಆತನ ಎದೆಯ ಭಾಗಕ್ಕೆ ತಾಗಿದ್ದು, ಗಣೇಶ ಕೂಡಲೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹಾಲಾಡಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಗಣೇಶ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತಿದ್ದ ಗಣೇಶ್, ಮನೆಯಲ್ಲಿ ನಡೆಯುವ ದೈವ ಕೆಲಸದಲ್ಲಿ ಭಾಗಿಯಾಗಲು ಪತ್ನಿಯೊಂದಿಗೆ ಊರಿಗೆ ಬಂದಿದ್ದರು ಎನ್ನಲಾಗಿದೆ.
ಬಿರುಸುಗೊಳ್ಳದ ಮುಂಗಾರು :
ರಾಜ್ಯ ಕರಾವಳಿಗೆ ಮುಂಗಾರು ಕಾಲಿಟ್ಟು ಕೆಲವು ದಿನಗಳಾದರೂ ಉಡುಪಿ ಜಿಲ್ಲೆಯಲ್ಲಿ ಅದಿನ್ನೂ ಬಿರುಸು ಪಡೆದಿಲ್ಲ. ಇದರಿಂದ ಜಿಲ್ಲೆಯ ರೈತರು ಆತಂಕಕ್ಕೊಳಗಾಗುವಂತಾಗಿದೆ. ಪ್ರತಿದಿನ 10ರಿಂದ 15ಸೆ.ಮಿ. ಮಳೆಯಾಗಬೇಕಿದ್ದಲ್ಲಿ, ಈ ಬಾರಿ ಒಂದು-ಎರಡು ಸೆ.ಮಿ. ಮಳೆ ಮಾತ್ರ ಬೀಳುತ್ತಿದೆ.
ಸೋಮವಾರ ಮುಂಜಾನೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 8.1ಮಿ.ಮೀ. ಮಳೆಯಾದ ವರದಿ ಬಂದಿದೆ. ಕುಂದಾಪುರದಲ್ಲಿ ಅತ್ಯಧಿಕ 15.4ಮಿ.ಮೀ. ಮಳೆಯಾದರೆ ಕಾಪುವಿನಲ್ಲಿ 13.5, ಬೈಂದೂರಿನಲ್ಲಿ 7.9, ಬ್ರಹ್ಮಾವರದಲ್ಲಿ 7.4, ಉಡುಪಿ 6.5, ಕಾರ್ಕಳ 2.4 ಹಾಗೂ ಹೆಬ್ರಿಯಲ್ಲಿ 2.2ಮಿ.ಮೀ. ಮಳೆ ಬಿದ್ದಿರುವುದಾಗಿ ವರದಿ ತಿಳಿಸಿದೆ.






