ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಗಾಳಿ ಮಳೆ; 23 ಮನೆಗಳಿಗೆ ಹಾನಿ
7.70ಲಕ್ಷ ರೂ. ನಷ್ಟ: ಸರಾಸರಿ 76.1ಮಿ.ಮೀ. ಮಳೆ

ಉಡುಪಿ: ರೆಡ್ ಅಲರ್ಟ್ ಘೋಷಿಸಿರುವಂತೆ ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದಲೇ ಭಾರೀ ಗಾಳಿ ಮಳೆ ಮುಂದುವರೆದಿದೆ. ಗಾಳಿಮಳೆಯ ಆರ್ಭಟಕ್ಕೆ ಹಲವು ಮನೆಗಳಿಗೆ ಹಾನಿಯಾಗಿವೆ. ಕಡಲು ಪ್ರಕ್ಷುಬ್ಧವಾಗಿದ್ದು, ರಕ್ಕಸಗಾತ್ರ ಅಲೆಗಳು ತೀರಕ್ಕೆ ಬಡಿಯುತ್ತಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ- 53.6ಮಿ.ಮೀ., ಕುಂದಾಪುರ -68.2ಮಿ.ಮೀ., ಉಡುಪಿ- 80.9ಮಿ.ಮೀ., ಬೈಂದೂರು-83.9ಮಿ.ಮೀ., ಬ್ರಹ್ಮಾವರ-93.3ಮಿ.ಮೀ., ಕಾಪು-48.9ಮಿ.ಮೀ., ಹೆಬ್ರಿ-114.0ಮಿ.ಮೀ. ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 76.1ಮಿ.ಮೀ. ಮಳೆ ಆಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಒಂದು ಮನೆಗೆ ಸಿಡಿಲು ಬಡಿದಿರುವ ಬಗ್ಗೆ ವರದಿಯಾಗಿದೆ. ಇದರಿಂದ ಒಟ್ಟು 7.70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಕುಂದಾಪುರ ತಾಲೂಕಿನ ಕರ್ಕುಂಜೆ, ಹೆಸಕುತ್ತೂರು, ಕಸಬಾ, ಹಾರ್ದಳ್ಳಿ ಮಂಡಳ್ಳಿ, ಸೇನಾಪುರ, ಬೀಜಾಡಿ ಗ್ರಾಮಗಳ ಏಳು ಮನೆಗಳ ಮೇಲೆ ಭಾರೀ ಗಾಳಿಮಳೆಗೆ ಮರ ಬಿದ್ದು ಹಾನಿಯಾಗಿವೆ. ಕಾರ್ಕಳ ತಾಲೂಕಿನ ಇನ್ನಾ, ಹಿರ್ಗಾನ, ಕಾರ್ಕಳ, ಮಿಯಾರು ಗ್ರಾಮದ ಐದು ಮನೆಗಳು ಹಾಗೂ ಕಾಪು ತಾಲೂಕಿನ ಪಾದೂರು, ಕಳತ್ತೂರು, ಮಜೂರು ಗ್ರಾಮದ ಮೂರು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿ ಅಪಾರ ನಷ್ಟವಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ವಾರ್ಡಿನ ತೋಂದುಬೆಟ್ಟಿನಲ್ಲಿ ಭಾರೀ ಗಾಳಿ ಮಳೆಗೆ ಗಿರಿಜಾ ಮಡಿವಾಳ್ತಿ ಹಾಗೂ ಕೊಡವೂರು ವಾರ್ಡಿನ ಹರಿ ಶೆಟ್ಟಿಗಾರ್ ಎಂಬವರ ಮನೆ ಮೇಲೆ ಮರ ಬಿದ್ದು ಒಟ್ಟು 60ಸಾವಿರ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಇಲಾಖೆಯ ಮೂಲಕ ಗರಿಷ್ಟ ಪರಿಹಾರ ಒದಗಿಸುವ ಭರವಸೆ ನೀಡಿದರು. ಅದೇ ರೀತಿ ಉಡುಪಿ ತಾಲೂಕಿನ ಪೆರ್ಡೂರು, ಹಿರೇಬೆಟ್ಟು, ಮರ್ಣೆ ಗ್ರಾಮದ ಮೂರು ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ.
ಕಂಟ್ರೋಲ್ ರೂಂನ ಸಹಾಯವಾಣಿ
ಉಡುಪಿ ಜಿಲ್ಲೆಯ ವಿಪತ್ತು ನಿರ್ವಹಣಾ ತಾಲೂಕು ಮಟ್ಟದ ಕಂಟ್ರೋಲ್ ರೂಂನ ಸಹಾಯವಾಣಿ ಸಂಖ್ಯೆಗಳು ಈ ರೀತಿ ಇದೆ.
ತುರ್ತು ಸೇವೆಗೆ ಶುಲ್ಕ ರಹಿತ: 1077, ದೂರವಾಣಿ ಸಂಖ್ಯೆ 0820-2574802, ತಹಶೀಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ: ಉಡುಪಿ- 0820 2520417, ಕುಂದಾಪುರ- 08254 230357, ಕಾರ್ಕಳ- 08258 230201, ಕಾಪು- 0820 2551444, ಬ್ರಹ್ಮಾವರ- 0820 2560494, ಬೈಂದೂರು- 08254 251657, ಹೆಬ್ರಿ- 08253 2520306 ಮತ್ತು ನಗರಸಭೆಯ ಸಹಾಯವಾಣಿ ನಿಯಂತ್ರಣ ಕೊಠಡಿ ಸಂಖ್ಯೆ 0820 2520306, ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ 9741943666ಕ್ಕೆ ಕರೆ ಮಾಡಬಹುದು.







