ಉಡುಪಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಆರ್ಭಟ; ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಮುಡಾರಿನಲ್ಲಿ ಕೊಚ್ಚಿ ಹೋದ ರಸ್ತೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ ಇಂದು ಕೂಡ ಮುಂದುವರೆದಿದೆ. ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯಲ್ಲಿ ಹರಿಯುವ ನದಿ, ಹೊಳೆಗಳು ತುಂಬಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಕಡೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಮತ್ತು ಕುಸಿದು ಹೋಗಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ನೆರೆ ಸೃಷ್ಠಿಯಾಗುವ ಭೀತಿ ಎದುರಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ- 80.3ಮಿ.ಮೀ., ಕುಂದಾಪುರ -56.4ಮಿ.ಮೀ., ಉಡುಪಿ- 52.3ಮಿ.ಮೀ., ಬೈಂದೂರು- 68.5ಮಿ.ಮೀ., ಬ್ರಹ್ಮಾವರ- 45.5ಮಿ.ಮೀ., ಕಾಪು- 85.9ಮಿ.ಮೀ., ಹೆಬ್ರಿ- 71.7 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 65.4ಮಿ.ಮೀ. ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ.
ಕೊಚ್ಚಿ ಹೋದ ರಸ್ತೆ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾರ್ಕಳ ತಾಲೂಕಿನ ಮುಡಾರು ಆಲ್ದಟ್ಟ ಸಂಕ ಪರ್ಯಾಯ ರಸ್ತೆ ಕೊಚ್ಚಿಕೊಂಡು ಹೋಗಿ, ಮುಡಾರು ಕೆರ್ವಾಶೆ ಮುಖ್ಯ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪರಿಸರದ ನೂರಾರು ಮನೆಗಳಿಗೆ ತೊಂದರೆಯಾಗಿದೆ.
ಇಲ್ಲಿ ಈ ಹಿಂದೆ ಇದ್ದ ಹಳೆ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ತೆರವು ಮಾಡಿ ಹೊಸ ಸೇತುವೆ ಕಾಮಗಾರಿ ಆರಂಭಿಸಿತ್ತು. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಣ್ಣಿನ ರಸ್ತೆಯನ್ನು ಅಲ್ಲೇ ಸಮೀಪ ನಿರ್ಮಿಸಲಾಗಿತ್ತು. ಇದೀಗ ವಿಪರೀತ ಮಳೆಯಿಂದ ನೀರಿನ ಹರಿವು ಹೆಚ್ಚಳವಾಗಿ ಮಣ್ಣಿನ ರಸ್ತೆ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ಇದರಿಂದ ಈ ರಸ್ತೆಯು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಆರೇಳು ಕಿ.ಮೀ. ಹೆಚ್ಚುವರಿಯಾಗಿ ಸುತ್ತಿ ಬಳಸಿ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಈ ಸಮಸ್ಯೆ ಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
17 ಮನೆಗಳಿಗೆ ಹಾನಿ: ಉಡುಪಿ ಜಿಲ್ಲೆಯಲ್ಲಿ ಗಾಳಿಮಳೆಗೆ ಮರ ಬಿದ್ದು ಒಟ್ಟು 17 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 3.80ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಕಾಪು ತಾಲೂಕಿನ ನಡ್ಪಾಲು ಗ್ರಾಮದ ಒಂದು ಮನೆ, ಬೈಂದೂರು ತಾಲೂಕಿನ ಶೀರೂರು, ಪಡುವರಿ ಗ್ರಾಮದ ಎರಡು ಮನೆಗಳು, ಕುಂದಾಪುರ ತಾಲೂಕಿನ ಗೋಪಾಡಿ, ಕೊರ್ಗಿ ಗ್ರಾಮದ ಎರಡು ಮನೆಗಳು, ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಒಂದು ಮನೆ, ಬ್ರಹ್ಮಾವರ ತಾಲೂಕಿನ ಕೆಂಜೂರು, ಹನೇಹಳ್ಳಿ, ಪಾರಂಪಳ್ಳಿ, ವಡ್ಡರ್ಸೆ, ಪಾಂಡೇಶ್ವರ, ಚೇರ್ಕಾಡಿ, ಹನೇಹಳ್ಳಿ, 34ನೆ ಕುದಿ ಗ್ರಾಮದ 10 ಮನೆಗಳಿಗೆ ಮರ ಬಿದ್ದು ಹಾನಿಯಾಗಿ ಅಪಾರ ನಷ್ಟವಾಗಿದೆ ಕಾರ್ಕಳ ತಾಲೂಕಿನ ಹಿರ್ಗಾನ ಅಶೋಕ್ ಕುಮಾರ್ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಭಾಗಶಃ ಹಾನಿಯಾಗಿದೆ.
ಬೈಂದೂರು ತಾಲೂಕಿನ ಉಳ್ಳೂರು ಎಂಬಲ್ಲಿ ಭಾರೀ ಗಾಳಿಮಳೆಗೆ ತುಂಗಾ ಗಾಣಿಗ ಎಂಬವರ ಅಡಿಕೆ ಕೃಷಿಗೆ ಹಾನಿಯಾಗಿದ್ದು, ಸುಮಾರು 18ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.







