ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಬಿರುಸಿನ ಮಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದ ನೀರು; ವಾಹನ ಸಂಚಾರಕ್ಕೆ ಅಡ್ಡಿ

ಕುಂದಾಪುರ : ಕಳೆದ ರಾತ್ರಿಯಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿದೆಡೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪದ ವೈಜ್ಞಾನಿಕ ಕಾಮಗಾಯಿಂದಾಗಿ ಅಲ್ಲೇ ಸಮೀಪದ ಹೋಟೆಲ್ ಕೆಲಸ ಗಾರ ರಮೇಶ್ ಗಾಣಿಗ ಎಂಬವರ ಮನೆ ಜಲಾವೃತಗೊಂಡಿದ್ದು, ಮನೆಯೊಳಗೆ ನೀರು ನುಗ್ಗಿದೆ. ಅದೇ ರೀತಿ ಕುಂದಾ ಪುರದ ಸಂತೆ ಮಾರ್ಕೆಟ್ ಒಳಗೆ ಆರ್‌ಟಿಓ ಇಲಾಖೆಯಿಂದ ವಾಹನ ಪಾಸಿಂಗ್ ನಡೆಯುತ್ತಿದ್ದು ಮಳೆಯ ನಡುವೆಯೂ ವಾಹನ ಮಾಲಕರು ತಮ್ಮ ವಾಹನಗಳ ನೀರಿನಲ್ಲಿಯೇ ನಿಲ್ಲಿಸಿ ಪಾಸಿಂಗ್ ಕಾರ್ಯಕ್ಕೆ ನಡೆಸಿದರು.
ಬೀಜಾಡಿ ರಾಷ್ಟ್ರೀಯ ಹೆದ್ದಾರಿಯ ೬೬ರ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದೆ. ಅಲ್ಲದೆ ಬೀಜಾಡಿಯ ಮೀನುಗಾರಿಕಾ ರಸ್ತೆಯಲ್ಲೂ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಟಿ.ಟಿ. ರಸ್ತೆ ಅಂಡರ್ಪಾಸ್ ಬಳಿ ಮಳೆ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಮೊಣಕಾಲೆತ್ತರ ನೀರು ನಿಂತ ಕಾರಣ ಹಲವರ ವಾಹನಗಳು ನೀರಿನ ಮಧ್ಯೆಯೇ ಸ್ಥಗಿತ ಗೊಂಡವು. ಇದರಿಂದ ಆಕ್ರೋಶಗೊಂಡ ಸವಾರರು, ’ನವಯುಗ-ಮಹಿಮೆ, ದ್ವಿಚಕ್ರ ವಾಹನಗಳ ರಸ್ತೆ ಸಾರಿಗೆ ನಿಷೇಧ, ಜಲಸಾರಿಗೆಗೆ ಮಾತ್ರ ಅವಕಾಶ-ಟಿ.ಟಿ ರಸ್ತೆ ಕುಂದಾಪುರ’ ಎಂಬ ಫಲಕ ಅಳವಡಿಸಿ ಆಡಳಿತವನ್ನು ಅಣಕಿಸಿದರು.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರಮುಖ ನದಿಗಳು ತುಂಬಿ ಹರಿಯುತ್ತಿದೆ. ಮಳೆ ಮುಂದುವರಿದರೆ ಅಲ್ಲಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ನೆರೆ ಉಂಟಾಗುವ ಭೀತಿ ಎದುರಾಗಿದೆ. ಕುಬ್ಜಾ ನದಿಯೂ ಉಕ್ಕಿ ಹರಿಯುತ್ತಿದ್ದು ಕಮಲಶಿಲೆ ದೇವಳಕ್ಕೆ ನೀರು ಪ್ರವೇಶಿಸುವ ಸಾಧ್ಯತೆಯಿದೆ. ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮೀಪದ ನದಿಯೂ ತುಂಬಿ ಹರಿಯುತ್ತಿದೆ.






