ಹೆಗ್ಗುಂಜೆ: ಸರಕಾರಿ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡ ತೆರವು

ಬ್ರಹ್ಮಾವರ: ತಾಲೂಕಿನ ಹೆಗ್ಗುಂಜೆ ಗ್ರಾಮದ ನೀರ್ ಜೆಡ್ಡು ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡಗಳನ್ನು ಸೋಮವಾರ ಬೆಳಿಗ್ಗೆ ಬ್ರಹ್ಮಾವರ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.
ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಹಾಗೂ ಲೋಕಾಯುಕ್ತ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಹಂತದ ಕಟ್ಟಡ ಹಾಗೂ ವಾಸವಿಲ್ಲದ 5 ಶೆಡ್ ಗಳನ್ನು ತೆರೆವುಗೊಳಿಸಲಾಗಿದೆ ಎಂದು ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ತಿಳಿಸಿದ್ದಾರೆ
ಪ್ರಕರಣದ ಹಿನ್ನೆಲೆ: ವಿಜಯ ಚೌಟ ಎಂಬವರು ಕೆಲವರಿಗೆ ಹಣಕ್ಕೆ ಸರಕಾರಿ ಜಮೀನು ಮಾರಾಟ ಮಾಡಿದ್ದು ಅದರಲ್ಲಿ ಅನಧೀಕೃತವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ಮಂದಾರ್ತಿಯ ವಿಜಯ ಲಕ್ಷ್ಮೀ ಹೆಬ್ಬಾಡಿ ಎಂಬವರು ಕುಂದಾಪುರ ಉಪವಿಭಾಗದ ಸಹಾಯಕ ಕಮೀಷನರ್ ರವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುವಂತೆ ಬ್ರಹ್ಮಾವರ ತಹಶೀಲ್ದಾರರಿಗೆ ಸಹಾಯಕ ಕಮೀಷನರ್ ಆದೇಶ ನೀಡಿದ್ದರು. ಈ ಮಧ್ಯೆ ವಿಜಯ ಲಕ್ಷ್ಮೀ, 2019ರ ಮೇ 6ರಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ನ್ಯಾಯಾಲಯದ ಕಛೇರಿಯಲ್ಲಿ ದೂರನ್ನು ಸಲ್ಲಿಸಿದ್ದರು. ಅದೇ ರೀತಿ ಕಂದಾಯ ಸಚಿವರಿಗೆ ಹಾಗೂ ಲೋಕಾಯುಕ್ತ ಬೆಂಗಳೂರು ಇಲ್ಲಿ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ಈ ಪ್ರಕರಣವು ವಿಶೇಷ ನ್ಯಾಯಾಲಯದಲ್ಲಿಯೂ ದಾಖಲಾಗಿರುವುದರಿಂದ ವಿಶೇಷ ನ್ಯಾಯಾಲಯದ ತೀರ್ಪಿನ ಪ್ರಕಾರ ಕ್ರಮಗಳನ್ನು ತೆಗದುಕೊಳ್ಳುವಂತೆ ನಿರ್ದೇಶನ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣಗಳು ವಿಚಾರಣೆ ನಡೆದು, ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನವನ್ನು ನೀಡಲಾಗಿತ್ತು. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಕ್ರಮ ಜರಗಿಸಲು ಬಾಕಿ ಇರುವಾಗಲೆ ಒತ್ತುವರಿದಾರು ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆರಂಭಿಸಿದರು ಎಂದು ತಹಶೀಲ್ದಾರ್ ತಿಳಿಸಿದ್ದಾರೆ
ಈ ಬಗ್ಗೆ ಸ್ಥಳೀಯವಾಗಿ ದೂರು ಬಂದ ಹಿನ್ನಲೆಯಲ್ಲಿ ಹೆಗ್ಗುಂಜೆ ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರೊಂದಿಗೆ 2025ರ ನ.20ರಂದು ಸ್ಥಳ ತನಿಖೆ ಮಾಡಿ, ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಮೌಖಿಕವಾಗಿ ಸೂಚನೆ ನೀಡಿ ವರದಿಯನ್ನು ಸಲ್ಲಿಸಿದ್ದರು. ಆದರೆ ಒತ್ತುವರಿದಾರರು ಕಾಮಗಾರಿ ನಿಲ್ಲಿಸದೇ ಮುಂದುವರಿಸಿದ್ದರು.
ಈ ಕುರಿತು ಕಾಮಗಾರಿಯನ್ನು ನಿಲ್ಲಿಸುವಂತೆ ತಾಲೂಕು ಕಛೇರಿಯಿಂದ ತಿಳುವಳಿಕೆ ನೋಟೀಸನ್ನು ನೀಡಲಾಗಿತ್ತು. ಆದರೂ ಕಟ್ಟಡ ಕಾಮಗಾರಿಯನ್ನು ಮುಂದುವರಿಸಿದ ಕಾರಣ ಈ ಅನಧೀಕೃತ ಕಟ್ಟಡ ಹಾಗೂ ವಾಸವಿಲ್ಲದ ಶೆಡ್ ಗಳನ್ನು ತೆರೆವು ಮಾಡುವಂತೆ 2025ರ ಜ.8ರಂದು ಆದೇಶವನ್ನು ನೀಡಲಾಗಿದೆ.
ಆ ದಿನ ತೆರವುಗೊಳಿಸಲು ಹೋದ ಸಂದರ್ಭದಲ್ಲಿ ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಶೆಟ್ಟಿ, ಸದಸ್ಯರಾದ ಲೋಕೇಶ್ , ಹಾಗೂ ಒತ್ತುವರಿದಾರರು ತೆರೆವು ಕಾರ್ಯಕ್ಕೆ ಅಡ್ಡಿ ಮಾಡಿದ್ದರು. ಆ ಕಾರಣದಿಂದ ತೆರವು ಕಾರ್ಯವನ್ನು ಸ್ಥಗತಗೊಳಿಸಲಾಗಿತ್ತು. ಒತ್ತುವರಿ ತೆರೆವು ಕಾರ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಈಗಾಗಲೇ ಪೋಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಿ ಇಂದು ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ತಹಶಿಲ್ದಾರ್ ಮಾಹಿತಿ ನೀಡಿದ್ದಾರೆ.







