ಸಮಾಜಮುಖಿ ಕಾರ್ಯಗಳಿಂದ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಎಲ್ಲ ಉದ್ಯಮಿಗಳಿಗೂ ಮಾದರಿ: ಸಚಿವ ಯು.ಟಿ.ಖಾದರ್

ಕಾಪು, ನ.2: ಹಿದಾಯತ್ ಗ್ರೂಪ್ ಆಫ್ ಕಂಪನೀಸ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಅವರಂತಹ ಉದ್ಯಮಿಗಳು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪ್ರೇರಣೆಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ ತಾವು ಹುಟ್ಟಿ ಬೆಳೆದ ಮಣ್ಣನ್ನು ಮರೆಯದೆ, ತಾಯ್ನಾಡಿನ ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ದೊಡ್ಡ ಸಂಕೇತ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಇತರ ಉದ್ಯಮಿಗಳಿಗೂ ಹಿದಾಯತುಲ್ಲಾ ಅಬ್ಬಾಸ್ ಮಾದರಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.
ಮೂಳೂರು ಅಲ್ ಇಹ್ಸಾನ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ 32ನೇ ಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಬಾಲಕರ ಹಾಸ್ಟೆಲ್‌ಗೆ ಶಿಲಾನ್ಯಾಸ ನೆರವೇರಿಸಿ ಹಾಗೂ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಅವರನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.
ಮಕ್ಕಳು ಸ್ವಾಭಿಮಾನದಿಂದ ಕೂಡಿದ ಗೌರವಯುತ ಬದುಕು ಕಟ್ಟಿಕೊಳ್ಳಬೇಕಾದರೆ ಶಿಕ್ಷಣವೇ ಪ್ರಮುಖ ಅಸ್ತ್ರ. ಅದಕ್ಕಾಗಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಎರಡನ್ನೂ ಸಮಾನವಾಗಿ ಪಡೆಯುವುದು ಅತ್ಯಗತ್ಯ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡುವುದು ಪ್ರತಿಯೊಬ್ಬ ಹೆತ್ತವರ ಜವಾಬ್ದಾರಿಯಾಗಿದೆ ಎಂದರು.
ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಕೇವಲ ಕನಸು ಕಂಡರೆ ಸಾಲದು, ನನಸಾಗಿಸಬಹುದಾದ ಕನಸುಗಳನ್ನು ಕಂಡು ಅವುಗಳ ಸಾಕಾರಕ್ಕಾಗಿ ನಿರಂತರ ಪ್ರಯತ್ನಿಸಬೇಕು. ಮಕ್ಕಳಿಗೆ ಕೇವಲ ಉದ್ಯೋಗ ಅಥವಾ ಆರ್ಥಿಕ ಯಶಸ್ಸಿಗಾಗಿ ಮಾತ್ರವಲ್ಲದೆ, ಸಂತೋಷ, ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಕೂಡಿದ ಜೀವನ ನಡೆಸಲು ಪೂರಕವಾದ ಶಿಕ್ಷಣ ನೀಡಬೇಕು. ಅದುವೇ ಹೆತ್ತವರ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಮುಖ ಗುರಿಯಾಗಬೇಕು ಎಂದು ಅವರು ತಿಳಿಸಿದರು.
ಹಿದಾಯತ್ ಗ್ರೂಪ್ ಆಫ್ ಕಂಪನೀಸ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಮಾತನಾಡಿ, ಮಕ್ಕಳ ಸಾಧನೆ ಕೇವಲ ಉತ್ತಮ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗಬಾರದು. ಅವರಲ್ಲಿ ಮಾನವೀಯ ಮೌಲ್ಯಗಳು, ತಂದೆ-ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡುವ ಗುಣ, ಕುಟುಂಬದಲ್ಲಿ ಉತ್ತಮ ಸಂಸ್ಕಾರ ಮತ್ತು ಸಮಾಜದೊಂದಿಗೆ ಸೌಹಾರ್ದಯುತವಾಗಿ ಬೆರೆಯುವ ಮನೋಭಾವ ಬೆಳೆಸಬೇಕು ಎಂದರು.
ಇಂದಿನ ಸಮಾಜವನ್ನು ಕಾಡುತ್ತಿರುವ ಮಾದಕ ವ್ಯಸನ ಸೇರಿದಂತೆ ವಿವಿಧ ದುಶ್ಚಟಗಳಿಂದ ಮಕ್ಕಳನ್ನು ದೂರವಿರಿಸುವುದು ಪೋಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಸನ್ನಡತೆ, ಆತ್ಮಗೌರವ, ನೈತಿಕ ಪ್ರಜ್ಞೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ತಿಳಿಸಿದರು.
ಅಲ್ ಇಹ್ಸಾಬ್ ಮಹಿಳಾ ವಸತಿ ನಿಲಯದ ನಿರ್ಮಾಣ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು ಮಾತನಾಡಿ, ನಿರಂತರ ಪರಿಶ್ರಮದ ಮೂಲಕ ಹಿದಾಯತುಲ್ಲಾ ಅಬ್ಬಾಸ್ ಉದ್ದಿಮೆಯಲ್ಲಿ ಗಮನಾರ್ಹರಾಗಿದ್ದಾರೆ. ಇವರು ವಿಶೇಷವಾಗಿ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯ ಕಾಳಜಿ ಮೆರೆದಿದ್ದಾರೆ ಎಂದು ಹೇಳಿದರು.
ಶಿಕ್ಷಣಕ್ಕೆ ಪ್ರೋತ್ಸಾಹ, ಆರೋಗ್ಯ ಸೇವೆಗೆ ಸಹಕಾರ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಮುಂದೆ ತಮ್ಮ ಪತ್ನಿಯ ಹೆಸರಿನಲ್ಲಿ ಸಂಸ್ಥೆಗೆ ಅಗತ್ಯವಾಗಿರುವ ಮಹಿಳಾ ಹಾಸ್ಟೆಲ್ ನಿರ್ಮಿಸುವ ಸಂಕಲ್ಪ ಹೊಂದಿದ್ದು, ಇದು ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗೆಗಿನ ಅವರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಿಕೆಎಸ್‌ಸಿ ಅಧ್ಯಕ್ಷ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ವಹಿಸಿದ್ದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿ ಎಸ್.ಎಂ. ಮುಸ್ತಫಾ, ಯುವ ಉದ್ಯಮಿ ರೆಹಾನ್ ಹಿದಾಯುತುಲ್ಲಾ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಡಿಕೆಎಸ್‌ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಮುಹಮ್ಮದ್ ಸೀದಿ, ಮೆನೇಜರ್ ಮುಸ್ತಫಾ ಸಅದಿ, ಆರ್ಥಿಕ ಕಾರ್ಯದರ್ಶಿ ದಾವೂದು ಕಜಮಾರ್, ಉಚ್ಚಿಲ ಮುಹಮ್ಮದ್ ತಂಙಳ್, ಅಬೂಬಕ್ಕರ್ ನೇಜಾರು, ಮನ್ಸೂರು ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.
ಡಿಕೆಎಸ್‌ಸಿ ಪ್ರಧಾನ ಕಾರ್ಯದರ್ಶಿ ಮಜೀದ್ ಕನ್ನಾಂಗರ್ ಸ್ವಾಗತಿಸಿದರು.






