ಹಿರಿಯಡ್ಕ | ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು

ಹಿರಿಯಡ್ಕ, ನ.3: ಸೊಸೈಟಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಕೋ ಅಪರೇಟಿವ್ ಟೌನ್ ಬ್ಯಾಂಕ್, ಪೆರ್ಡೂರು ಶಾಖೆಯಲ್ಲಿ ಪುನೀತ್ ಆನಂದ ಕೋಟ್ಯಾನ್ ಎಂಬಾತ 2024ರ ಎ.8ರಂದು ಒಟ್ಟು 40.1 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಅಡಮಾಡನವಿಟ್ಟು 1,80,000ರೂ. ಸಾಲ ಪಡೆದಿದ್ದನು. ನಂತರ ಆತ ಬೇರೆ ಬೇರೆ ದಿನಾಂಕ ದಂದು ಚಿನ್ನದ ಬಳೆಗಳ ಮೇಲೆ ನೀಡಿದ ಚಿನ್ನಾಭರಣ ಸಾಲದ ಖಾತೆಯನ್ನು ಮುಕ್ತಗೊಳಿಸಿ ಹೊಸತಾಗಿ ಪಡೆದಿದ್ದನು.
2025ರ ಸೆ.15ರಂದು ಅದೇ ಎರಡು ಬಳೆಗಳ ಮೇಲೆ ಹೊಸದಾಗಿ 2,80,000ರೂ. ಸಾಲ ಪಡೆದಿದ್ದನು. ಅ.8ರಂದು ಪುನೀತ್, ಹೊಸದಾಗಿ ಒಂದು ಚಿನ್ನದ ಸರ ಅಡಮಾನ ಇಟ್ಟು 1,50,000ರೂ. ಸಾಲ ಬೇಕೆಂದು ವಿನಂತಿಸಿದ್ದನು. ಆಗ ಬ್ಯಾಂಕಿನ ಸರಾಫರು ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದುಬಂದಿತ್ತು.
ಈ ಘಟನೆಯ ಬಳಿಕ ಬ್ಯಾಂಕಿನವರು ಪುನೀತ್ ಈ ಹಿಂದೆ ಅಡಮಾನ ಇಟ್ಟ ಚಿನ್ನಾಭರಣವನನ್ನು ಪರಿಶೀಲಿಸಿದ್ದು, ಆಗ ಅವು ನಕಲಿ ಎಂಬುದು ಕಂಡು ಬಂದಿದೆ. ಈತ ಬೇರೆ ಯಾವುದೋ ಲೋಹದಿಂದ ತಯಾರಿಸಿದ ಆಭರಣದ ಮೇಲೆ ಚಿನ್ನದ ಲೇಪನವನ್ನು ಮಾಡಿದ್ದು, ಅದು ಮೇಲ್ನೋಟಕ್ಕೆ 22 ಕ್ಯಾರೆಟ್ ಚಿನ್ನದಂತೆಯೇ ತಯಾರಿಸಿ ಅಡಮಾನ ಇಟ್ಟು ಬ್ಯಾಂಕಿಗೆ 2.80ಲಕ್ಷ ರೂ. ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







