ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಭೀಕರ ಹತ್ಯಾಕಾಂಡ: ನೇಜಾರು ಪ್ರಕರಣದ ಬಗ್ಗೆ ಬೆಚ್ಚಿ ಬಿದ್ದ ಜನತೆ
ಆರೋಪಿಯ ಬಂಧನಕ್ಕೆ ಆಗ್ರಹ

ಉಡುಪಿ, ನ.12: ಉಡುಪಿ ಸಮೀಪದ ನೇಜಾರು ತೃಪ್ತಿ ಲೇಔಟ್‌ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಈ ರೀತಿಯ ಭೀಕರ ಹತ್ಯೆ ಇದೇ ಮೊದಲ ಬಾರಿಗೆ ನಡೆದಿದೆ.
2019ರಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದನು. ಅದೇ ರೀತಿ ಕೋಟ ಮಣೂರಿನಲ್ಲಿ ಇಬ್ಬರು ಯುವಕರನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು.
ಆದರೆ ಇಂದು ದುಷ್ಕರ್ಮಿಯೊಬ್ಬ ಒಂದೇ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆ ಗೈದಿರುವುದು ಉಡುಪಿ ಜಿಲ್ಲೆಯಲ್ಲಿಯೇ ಈವರೆಗೆ ನಡೆದ ಅತ್ಯಂತ ಭೀಕರ ಹತ್ಯಾಕಾಂಡವಾಗಿದೆ. ಈ ಘಟನೆ ಸ್ಥಳೀಯರು ಮಾತ್ರ ವಲ್ಲದೆ ಇಡೀ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಠಿಸಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.
‘ನೂರು ಮುಹಮ್ಮದ್ ಅವರ ಕುಟುಂಬ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಈ ಕುಟುಂಬದಲ್ಲಿ ಎಲ್ಲರೂ ಅತ್ಯಂತ ಸೌಮ್ಯ ಸ್ವಭಾವದರು. ಈ ಘಟನೆ ಕೇಳಿ ನಮಗೆ ಆತಂಕವಾಗಿದೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು’ ಎಂದು ಸ್ಥಳೀಯರಾದ ನಝೀರ್ ನೇಜಾರು ಹೇಳಿದರು.
‘ದೂರದ ಮೆಟ್ರೋ ಸಿಟಿಯಲ್ಲಿ ಕೇಳುತ್ತಿದ್ದ ಭೀಬತ್ಸ ಕೃತ್ಯ ಇಂದು ನಮ್ಮ ಹಳ್ಳಿಯಲ್ಲಿ ನಡೆದಿದೆ. ಪೊಲೀಸರು ತಕ್ಷಣ ಆರೋಪಿಯನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಮಾಡಬೇಕು’ ಎಂದು ಅಸ್ಲಾಂ ಹೈಕಾಡಿ ಒತ್ತಾಯಿಸಿದರು.
‘ನಡೆಯಬಾರದ ಘಟನೆ ನಡೆದು ಹೋಗಿದೆ. ಯಾರಿಗೂ ರಕ್ಷಣೆ ಇಲ್ಲವಾಗಿದೆ. ಇಡೀ ಕುಟುಂಬವನ್ನು ಸರ್ವನಾಶ ಮಾಡಲಾಗಿದೆ. ಪೊಲೀಸರು ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ಕೊಡಬೇಕು. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳು ಎಲ್ಲಿಯೂ ನಡೆಯಲು ಅವಕಾಶ ನೀಡಬಾರದು. ಈ ಘಟನೆ ಕೇಳಿ ನಮಗೆ ಭಯ ಉಂಟಾಗಿದೆ ಎಂದು ನೆರೆಮನೆಯ ಇಸ್ಮಾಯಿಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದೇ ಕುಟುಂಬದ ನಾಲ್ವರ ಹತ್ಯೆಯು ಅತ್ಯಂತ ಅಮಾನುಷ ಕೃತ್ಯವಾಗಿದ್ದು ಈ ಘಟನೆ ತೀವ್ರ ಖಂಡನೀಯ. ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಶೀಘ್ರವಾಗಿ ಬಂಧಿಸಬೇಕೆಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ ಆಗ್ರಹಿಸಿದ್ದಾರೆ.
ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದ ಕೃತ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಸಮಿತಿಯ ಉಪಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ ತೀವ್ರವಾಗಿ ಖಂಡಿಸಿದ್ದಾರೆ. ಹಂತಕರನ್ನು ಶೀಘ್ರವಾಗಿ ಪತ್ತೆ ಹಚ್ಚಿ ಜಿಲ್ಲೆಯ ನಾಗರಿಕರಿಗೆ ರಕ್ಷಣೆಯ ಭರವಸೆ ನೀಡುವಂತೆ ಅವರು ಎಸ್ಪಿಯವರಲ್ಲಿ ಆಗ್ರಹಿಸಿದ್ದಾರೆ.
‘ನನ್ನ ಕ್ಷೇತ್ರದಲ್ಲಿ ನಡೆಯಬಾರದಂತಹ ಅಹಿತಕರ ಘಟನೆ ಇಂದು ನಡೆದಿದೆ. ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಡೀ ಪರಿಸರದಲ್ಲಿ ದುಃಖದ ವಾತಾವರಣ ಸೃಷ್ಠಿಸಿದೆ. ಎಸ್ಪಿಯವರು ಸಮರ್ಥ ತಂಡದೊಂದಿಗೆ ಆದಷ್ಟು ಬೇಗ ಈ ಪ್ರಕರಣವನ್ನು ಪತ್ತೆ ಹಚ್ಚಿ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿದೆ. ಕೃತ್ಯಕ್ಕೆ ಕಾರಣ ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು’
-ಯಶ್ಪಾಲ್ ಸುವರ್ಣ, ಶಾಸಕರು, ಉಡುಪಿ
"ಈ ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. ಈ ಬಗ್ಗೆ ಗೃಹ ಸಚಿವರನ್ನು ಸಂಪರ್ಕಿಸಿ ಘಟನೆಯ ಮಾಹಿತಿ ನೀಡಲಾಗಿದೆ. ಈ ಕೃತ್ಯ ಇಡೀ ಜಿಲ್ಲೆಗೆ ದೊಡ್ಡ ಕಳಂಕವಾಗಿದೆ. ಪೊಲೀಸ್ ಇಲಾಖೆ ಮೇಲೆ ನಮಗೆ ಭರವಸೆ ಇದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಿದೆ"
-ಎಂ.ಎ.ಗಫೂರು, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ
"ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿರುವ ಪ್ರಕರಣ ಇಡೀ ಜಿಲ್ಲೆಯನ್ನೇ ದಿಗ್ಬ್ರಮೆಗೊಳಿಸಿದೆ. ಶೀಘ್ರವಾಗಿ ಕೊಲೆಗಾರನನ್ನು ಪತ್ತೆ ಹಚ್ಚಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಉಡುಪಿ ಜಾಮಿಯಾ ಮಸೀದಿ ಆಡಳಿತ ಸಮಿತಿಯು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ"







